ದಾವಣಗೆರೆ, ಜೂ. 24 (DaijiworldNews/AA): ದಾವಣಗೆರೆಯ ಹರಿಹರದಲ್ಲಿ ಬಂಧನಕ್ಕೊಳಪಟ್ಟಿದ್ದ ಶಂಕಿತ ಉಗ್ರ ಉತ್ತರ ಪ್ರದೇಶ ಮೂಲದ ಸುಹೇಲ್, ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿದ್ದಾಗಿ ವಿಚಾರಣೆ ವೇಳೆ ಬಹಿರಂಗಗೊಳಿಸಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

ಹರಿಹರ ಗ್ರಾಮಾಂತರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಉತ್ತರ ಪ್ರದೇಶ ಮೂಲದ ಶಂಕಿತ ಉಗ್ರ ಸುಹೇಲ್(20) ನನ್ನು ಮಂಗಳವಾರ ಬಂಧಿಸಲಾಗಿತ್ತು. ಬಳಿಕ ಆತನ ವಿಚಾರಣೆ ನಡೆಸಿದ ತನಿಖಾಧಿಕಾರಿಗಳ ಮುಂದೆ ಅಯೋಧ್ಯೆಯ ಶ್ರೀರಾಮ ಮಂದಿರದಲ್ಲಿ ಬಾಂಬ್ ಸ್ಫೋಟಿಸಲು ಸಂಚು ರೂಪಿಸಿರುವುದಾಗಿ ತಿಳಿಸಿದ್ದಾನೆ ಎನ್ನಲಾಗಿದೆ.
'ಕೋಟ್ಯಂತರ ಹಿಂದುಗಳ ಆರಾಧ್ಯ ದೈವದ ನೆಲೆಯಾದ ಉತ್ತರ ಪ್ರದೇಶದ ಅಯೋಧ್ಯೆಯ ರಾಮ ಮಂದಿರವನ್ನು ಬಾಂಬ್ ಇಟ್ಟು ಸ್ಫೋಟಿಸಲು ನಾನು ಬಯಸಿದ್ದೆ' ಎಂದು ಆರೋಪಿಯು ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎಂದು ಹೇಳಲಾಗಿದೆ.
ಇನ್ನು ತನಿಖೆ ವೇಳೆ ಆರೋಪಿಯ ಮೊಬೈಲ್ನಲ್ಲಿ ಪಾಕಿಸ್ತಾನದ ಕೋಡ್ ಹೊಂದಿರುವ ಗ್ರೂಪ್ಗಳು ಹಾಗೂ ಮಾರಕಾಸ್ತ್ರಗಳನ್ನು ಹಿಡಿದಿರುವ ಚಿತ್ರಗಳು ಪತ್ತೆಯಾಗಿದೆ. ಈತನ ಫೋನ್ನಲ್ಲಿ ಪಾಕಿಸ್ತಾನದ ಕಂಟ್ರಿ ಕೋಡ್ ಹೊಂದಿರುವ ಮೊಬೈಲ್ ಸಂಖ್ಯೆಯೊಂದು 'ರಾಣಾ ಬಾಯ್' ಎಂಬ ಹೆಸರಿನಲ್ಲಿ ಸೇವ್ ಆಗಿರುವುದು ಬೆಳಕಿಗೆ ಬಂದಿದೆ.
ಭಾರತದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಹಾಗೂ ಸಮಾಜ ಘಾತಕ ಚಟುವಟಿಕೆಗಳನ್ನು ನಡೆಸಿ ಸಾವು-ನೋವು ಸೃಷ್ಟಿಸಲು ಈತ ಮತ್ತು ಈತನ ತಂಡ ಸಂಚು ರೂಪಿಸಿತ್ತು ಎಂಬುದು ಪ್ರಾಥಮಿಕ ತನಿಖೆ ವೇಳೆ ದೃಢಪಟ್ಟಿದೆ. ಆತನನ್ನು ಹೆಚ್ಚಿನ ತನಿಖೆಗಾಗಿ ಮಂಗಳವಾರ ಸಂಜೆ ತುಮಕೂರು ಪೊಲೀಸರಿಗೆ ಹಸ್ತಾಂತರಿಸಲಾಗಿದೆ.