ನವದೆಹಲಿ, ಜೂ. 24 (DaijiworldNews/AA): ನೀಟ್-2026 ಪರೀಕ್ಷೆಯಲ್ಲಿ ಲೋಪಗಳು ಆಗಿದ್ದನ್ನು ಒಪ್ಪಿಕೊಂಡಿದ್ದೇವೆ. ಆದರೆ, ತಪ್ಪುಗಳನ್ನು ಸರಿಪಡಿಸಿ ಮರುಪರೀಕ್ಷೆಯನ್ನು ಯಶಸ್ವಿಯಾಗಿ ನಡೆಸಲಾಗಿದೆ ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.

ಖಾಸಗಿ ಸುದ್ದಿ ವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಅವರು, "ನಮ್ಮ ಕಡೆಯಿಂದ ಕೆಲವು ಲೋಪಗಳು ಆಗಿದ್ದವು. ಅದನ್ನು ನಾವು ಒಪ್ಪಿಕೊಂಡಿದ್ದೇವೆ. ನಂತರ ಅಗತ್ಯ ಕ್ರಮ ಕೈಗೊಂಡು ವ್ಯವಸ್ಥೆಯನ್ನು ಸರಿಪಡಿಸಿದ್ದೇವೆ" ಎಂದಿದ್ದಾರೆ.
"ಪರೀಕ್ಷೆ ರದ್ದಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ವಿದ್ಯಾರ್ಥಿಗಳ ಭವಿಷ್ಯಕ್ಕೆ ಯಾವುದೇ ಧಕ್ಕೆಯಾಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದರು. ನೀಟ್ ಅಭ್ಯರ್ಥಿಗಳು ಮತ್ತು ಅವರ ಕುಟುಂಬಗಳು ಆತಂಕ ಪಡಬೇಕಿಲ್ಲ. ದೇಶದ ವ್ಯವಸ್ಥೆಯ ಮೇಲೆ ನಂಬಿಕೆ ಇಡಿ. ವಿದ್ಯಾರ್ಥಿಗಳ ಭವಿಷ್ಯ ಸುರಕ್ಷಿತವಾಗಿಡಲು ಸರ್ಕಾರ ಬದ್ಧವಾಗಿದೆ" ಎಂದು ತಿಳಿಸಿದ್ದಾರೆ.
"ಪೇಪರ್ ಮಾಫಿಯಾದ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಇಂತಹ ಪ್ರಕರಣಗಳ ತ್ವರಿತ ವಿಚಾರಣೆಗೆ ವಿಶೇಷ ನ್ಯಾಯಾಲಯ ಸ್ಥಾಪಿಸಲಾಗುವುದು" ಎಂದು ಮಾಹಿತಿ ನೀಡಿದ್ದಾರೆ.