ನವದೆಹಲಿ, ಜು. 02 (DaijiworldNews/TA): ದೇಶಾದ್ಯಂತ ವೇಗವಾಗಿ ಹೆಚ್ಚುತ್ತಿರುವ ನೆರವಿನ ಸಂತಾನೋತ್ಪತ್ತಿ ತಂತ್ರಜ್ಞಾನ ಮತ್ತು ಇನ್ ವಿಟ್ರೊ ಫರ್ಟಿಲೈಸೇಷನ್ (IVF) ಕೇಂದ್ರಗಳ ಕಾರ್ಯನಿರ್ವಹಣೆಗೆ ಕೇಂದ್ರ ಸರ್ಕಾರ ಹೊಸ ನಿಯಮಗಳನ್ನು ಜಾರಿಗೊಳಿಸಿದೆ. ಇನ್ಮುಂದೆ ಎಲ್ಲಾ ಫಲವತ್ತತೆ ಚಿಕಿತ್ಸಾಲಯಗಳು ಮತ್ತು ವೀರ್ಯ ಬ್ಯಾಂಕುಗಳು ಪ್ರತಿ ಐದು ವರ್ಷಗಳಿಗೊಮ್ಮೆ ತಮ್ಮ ಪರವಾನಗಿಯನ್ನು ಕಡ್ಡಾಯವಾಗಿ ನವೀಕರಿಸಿಕೊಳ್ಳಬೇಕು. ಸರೊಗಸಿ ಚಿಕಿತ್ಸಾಲಯಗಳಿಗೆ ಈ ಅವಧಿಯನ್ನು ಮೂರು ವರ್ಷಗಳಾಗಿ ನಿಗದಿಪಡಿಸಲಾಗಿದೆ.

ಹೊಸ ನಿಯಮದ ಪ್ರಕಾರ, ಪರವಾನಗಿ ಅವಧಿ ಮುಗಿಯುವ ಕನಿಷ್ಠ 60 ದಿನಗಳ ಮುಂಚಿತವಾಗಿ ರಾಷ್ಟ್ರೀಯ ART ಮತ್ತು ಸರೊಗಸಿ ನೋಂದಣಿ ಪೋರ್ಟಲ್ ಮೂಲಕ ಆನ್ಲೈನ್ನಲ್ಲಿ ನವೀಕರಣಕ್ಕೆ ಅರ್ಜಿ ಸಲ್ಲಿಸುವುದು ಕಡ್ಡಾಯವಾಗಿದೆ.
ಕೇಂದ್ರ ಸರ್ಕಾರ ನವೀಕರಣ ಶುಲ್ಕವನ್ನೂ ನಿಗದಿಪಡಿಸಿದೆ :
ಹಂತ-1 IVF ಕ್ಲಿನಿಕ್ಗಳು ಮತ್ತು ವೀರ್ಯ ಬ್ಯಾಂಕ್ಗಳು: ರೂ. 25,000 ನವೀಕರಣ ಶುಲ್ಕ. ಗಡುವು ಮೀರಿದರೆ ರೂ. 50,000 ಪಾವತಿಸಬೇಕು.
ಹಂತ-2 IVF ಕ್ಲಿನಿಕ್ಗಳು: ರೂ.1 ಲಕ್ಷ ನವೀಕರಣ ಶುಲ್ಕ. ವಿಳಂಬವಾಗಿ ಅರ್ಜಿ ಸಲ್ಲಿಸಿದರೆ ರೂ. 2 ಲಕ್ಷ ದಂಡ ಪಾವತಿಸಬೇಕಾಗುತ್ತದೆ.
ಆದರೆ, ಸರ್ಕಾರಿ ಸ್ವಾಮ್ಯದ ಆಸ್ಪತ್ರೆಗಳು ಹಾಗೂ ಸರ್ಕಾರಿ ಸಂಸ್ಥೆಗಳಿಗೆ ಈ ಶುಲ್ಕ ಮತ್ತು ನಿಯಮಗಳಿಂದ ಸಂಪೂರ್ಣ ವಿನಾಯಿತಿ ನೀಡಲಾಗಿದೆ. ನವದೆಹಲಿ ಮೂಲದ ನರ್ಚರ್ ಕ್ಲಿನಿಕ್ನ ಐವಿಎಫ್ ತಜ್ಞೆ ಡಾ. ಅರ್ಚನಾ ಧವನ್ ಬಜಾಜ್ ಅವರ ಪ್ರಕಾರ, ದೇಶದಲ್ಲಿರುವ IVF ಮತ್ತು ART ಕೇಂದ್ರಗಳ ಪೈಕಿ ಕೇವಲ ಶೇ.20 ರಿಂದ 25 ರಷ್ಟು ಕೇಂದ್ರಗಳಲ್ಲಷ್ಟೇ ಇದುವರೆಗೆ ಅಧಿಕೃತ ಪರಿಶೀಲನೆ ನಡೆದಿದೆ.
ಹೊಸ ನಿಯಮಗಳಿಂದ ಕ್ಲಿನಿಕ್ಗಳು ತಮ್ಮ ಸೇವೆಯ ಗುಣಮಟ್ಟವನ್ನು ಹೆಚ್ಚಿಸಬೇಕಾಗುತ್ತದೆ. ಜೊತೆಗೆ ರೋಗಿಗಳ ವೈದ್ಯಕೀಯ ದಾಖಲೆಗಳ ನಿರ್ವಹಣೆ ಹಾಗೂ ಚಿಕಿತ್ಸಾ ಪಾರದರ್ಶಕತೆ ಮತ್ತಷ್ಟು ಸುಧಾರಣೆಯಾಗಲಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ನವೀಕರಣಕ್ಕೆ ಅರ್ಜಿ ಸಲ್ಲಿಸಿದ ಬಳಿಕ 60 ದಿನಗಳೊಳಗೆ ಸಂಬಂಧಪಟ್ಟ ಅಧಿಕಾರಿಗಳು ಕ್ಲಿನಿಕ್ಗಳ ಪರಿಶೀಲನೆ ನಡೆಸಲಿದ್ದಾರೆ. ವೈದ್ಯಕೀಯ ಮತ್ತು ನೈತಿಕ ಮಾನದಂಡಗಳನ್ನು ಸಂಪೂರ್ಣವಾಗಿ ಪಾಲಿಸಿರುವ ಸಂಸ್ಥೆಗಳಿಗೆ ಮಾತ್ರ ಪರವಾನಗಿ ನವೀಕರಣ ಮಾಡಲಾಗುತ್ತದೆ. ನವೀಕರಿಸಿದ ಪರವಾನಗಿ ಪ್ರಮಾಣಪತ್ರವನ್ನು ಕ್ಲಿನಿಕ್ನ ಪ್ರಮುಖ ಸ್ಥಳದಲ್ಲಿ ಸಾರ್ವಜನಿಕರಿಗೆ ಕಾಣುವಂತೆ ಪ್ರದರ್ಶಿಸುವುದೂ ಕಡ್ಡಾಯವಾಗಿದೆ.
ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ, ಭಾರತದಲ್ಲಿ ಸುಮಾರು ಶೇ.15 ರಷ್ಟು ದಂಪತಿಗಳು ಬಂಜೆತನದ ಸಮಸ್ಯೆಯನ್ನು ಎದುರಿಸುತ್ತಿದ್ದಾರೆ. ವಾಣಿಜ್ಯ ಸರೊಗಸಿ ದೇಶದಲ್ಲಿ ನಿಷೇಧಗೊಂಡಿದ್ದರೂ, ಯಾವುದೇ ಆರ್ಥಿಕ ವ್ಯವಹಾರವಿಲ್ಲದ ಪರಹಿತಚಿಂತನೆಯ ಸರೊಗಸಿಗೆ ಬೇಡಿಕೆ ಹೆಚ್ಚುತ್ತಿದೆ.
ಉದ್ಯಮದ ಅಂದಾಜಿನ ಪ್ರಕಾರ, ಭಾರತದಲ್ಲಿ 5,000ಕ್ಕೂ ಹೆಚ್ಚು IVF ಹಾಗೂ ಸಂತಾನೋತ್ಪತ್ತಿ ಚಿಕಿತ್ಸಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕ್ಷೇತ್ರವು ವೇಗವಾಗಿ ಬೆಳೆಯುತ್ತಿದೆ. ಮುಂಬರುವ ವರ್ಷಗಳಲ್ಲಿ ಭಾರತದ ಸಂತಾನೋತ್ಪತ್ತಿ ಆರೋಗ್ಯ ಮಾರುಕಟ್ಟೆಯ ಮೌಲ್ಯ ಬಿಲಿಯನ್ ಡಾಲರ್ ಮಟ್ಟ ತಲುಪುವ ನಿರೀಕ್ಷೆಯಿದೆ.
ಮುಂಬೈನ ಲೀಲಾವತಿ ಆಸ್ಪತ್ರೆಯ ಐವಿಎಫ್ ತಜ್ಞ ಡಾ. ಹೃಷಿಕೇಶ್ ಪೈ ಅವರು ಸರ್ಕಾರದ ಹೊಸ ನಿಯಮವನ್ನು ಸ್ವಾಗತಿಸಿದ್ದು, ರೋಗಿಗಳ ಸುರಕ್ಷತೆ ಮತ್ತು ಗುಣಮಟ್ಟದ ಚಿಕಿತ್ಸೆಗೆ ಇದು ಸಹಕಾರಿಯಾಗಲಿದೆ. ಆದರೆ ಸಣ್ಣ ಕ್ಲಿನಿಕ್ಗಳಿಗೆ ಅನಗತ್ಯ ತೊಂದರೆಯಾಗದಂತೆ ನಿಯಮಗಳನ್ನು ಪ್ರಾಯೋಗಿಕವಾಗಿ ಜಾರಿಗೊಳಿಸಬೇಕು ಎಂದು ಸಲಹೆ ನೀಡಿದ್ದಾರೆ.