ನವದೆಹಲಿ, ಜು. 02 (DaijiworldNews/AK):ಮಧ್ಯಪ್ರಾಚ್ಯ ಯುದ್ಧದ ವೇಳೆ ತೈಲ ಕಂಪನಿಗಳು ಅಸಲು ವೆಚ್ಚಕ್ಕಿಂತ ಕಡಿಮೆ ಬೆಲೆಗೆ ಪೆಟ್ರೋಲ್, ಡೀಸೆಲ್ ಮತ್ತು ಎಲ್ಪಿಜಿ ಮಾರಾಟ ಮಾಡಿದ್ದರಿಂದ ಜೂನ್ 30 ರವರೆಗಿನ ಅವಧಿಗೆ ಒಟ್ಟು 74,781 ಕೋಟಿ ರೂ. ನಷ್ಟ ಅನುಭವಿಸಿವೆ ಎಂದು ಕೇಂದ್ರ ಪೆಟ್ರೋಲಿಯಂ ಸಚಿವ ಹರ್ದೀಪ್ ಸಿಂಗ್ ಪುರಿ ಗುರುವಾರ ತಿಳಿಸಿದ್ದಾರೆ.

ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಈಗ ಕಚ್ಚಾ ತೈಲ ಬೆಲೆಗಳು ಇಳಿಕೆಯಾಗಿದ್ದರೂ, ತೈಲ ಕಂಪನಿಗಳು ಇನ್ನೂ ನಷ್ಟದಲ್ಲೇ ಇವೆ. ತೈಲ ಕಂಪನಿಗಳು ಸಾಮಾನ್ಯವಾಗಿ ತಮಗೆ ಬೇಕಾದ ಕಚ್ಚಾ ತೈಲವನ್ನು ಕನಿಷ್ಠ ಎರಡು ತಿಂಗಳು ಮುಂಚಿತವಾಗಿಯೇ ಖರೀದಿಸುತ್ತವೆ. ಅಂದರೆ ಈಗ ಕಂಪನಿಗಳು ಸಂಸ್ಕರಿಸುತ್ತಿರುವ ತೈಲವು ಏಪ್ರಿಲ್ ಅಥವಾ ಮೇ ತಿಂಗಳ ಆರಂಭದಲ್ಲಿ, ಅಂದರೆ ಪಶ್ಚಿಮ ಏಷ್ಯಾ ಬಿಕ್ಕಟ್ಟು ಉತ್ತುಂಗದಲ್ಲಿದ್ದಾಗ ದುಬಾರಿ ಬೆಲೆಗೆ ಖರೀದಿಸಿದ್ದಾಗಿದೆ. ಹೀಗಾಗಿ ಜಾಗತಿಕವಾಗಿ ದರ ಇಳಿಕೆಯಾಗಿದ್ದರೂ ಅದರ ಲಾಭ ತಕ್ಷಣಕ್ಕೆ ಸಿಗುತ್ತಿಲ್ಲ ಎಂದು ಸಚಿವರು ವಿವರಿಸಿದರು.
ಮಾರ್ಚ್, ಏಪ್ರಿಲ್, ಮೇ ಮತ್ತು ಜೂನ್ ತಿಂಗಳ ಸಂಕಷ್ಟದ ಅವಧಿಯಲ್ಲೂ ದೇಶದ ಯಾವುದೇ ಭಾಗದಲ್ಲಿ ತೈಲ ಸರಬರಾಜಿನಲ್ಲಿ ವ್ಯತ್ಯಯವಾಗಿಲ್ಲ. ಎಲ್ಲೂ ಪೆಟ್ರೋಲ್ ಬಂಕ್ಗಳು ಮುಚ್ಚಿಲ್ಲ ಅಥವಾ ಜನರು ಕ್ಯೂ ನಿಲ್ಲುವ ಪರಿಸ್ಥಿತಿ ಬರಲಿಲ್ಲ. ಬಿಕ್ಕಟ್ಟನ್ನು ಭಾರತ ಯಶಸ್ವಿಯಾಗಿ ನಿಭಾಯಿಸಿದೆ ಎಂದು ಸಚಿವರು ಹೆಮ್ಮೆಯಿಂದ ಹೇಳಿದರು.