ಹಾವೇರಿ, ,ಜು.16 (DaijiworldNews/AK): ಕಾಂಗ್ರೆಸ್ ಅಧಿಕಾರಕ್ಕೆ ಬರಲು ಕೇವಲ ಅಲ್ಪಸಂಖ್ಯಾತರಷ್ಟೇ ಮತ ನೀಡಿದ್ದಾರಾ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಪ್ರಶ್ನಿಸಿದ್ದಾರೆ.

ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರದ ವಿರುದ್ಧ ಇಂದು ಇಲ್ಲಿ ಹಮ್ಮಿಕೊಂಡಿದ್ದ ಬೃಹತ್ ಪ್ರತಿಭಟನೆ ಸಂದರ್ಭದಲ್ಲಿ ಅವರು ಮಾತನಾಡಿದರು. ನಾವು ಹಿಂದೂಗಳ ಪರ ಧ್ವನಿ ಎತ್ತಿ ಜಾಗೃತಿ ಮೂಡಿಸಬೇಕಿದೆ. ನಾಳೆ ಬಿಡದಿ ಟೌನ್ಶಿಪ್ ರಚನೆ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ತಿಳಿಸಿದರು.
ಪಶ್ಚಿಮ ಬಂಗಾಲದಲ್ಲಿ ಮಮತಾ ಬ್ಯಾನರ್ಜಿ ಸರಕಾರದಿಂದ ಹಿಂದೂಗಳ ಮಾರಣಹೋಮ ನಡೆಯುತ್ತಿತ್ತು. ಅಲ್ಲಿ ನಮ್ಮ ರಾಷ್ಟ್ರೀಯ ಅಧ್ಯಕ್ಷ ನಿತಿನ್ ನವೀನ್, ಗೃಹ ಸಚಿವ ಅಮಿತ್ ಶಾ ಅವರ ಮಾರ್ಗದರ್ಶನದಲ್ಲಿ ಹಿಂದೂವಿರೋಧಿ ಟಿಎಂಸಿ ಸರಕಾರವನ್ನು ಬಿಜೆಪಿ ಕಾರ್ಯಕರ್ತರು ಬುಡಸಮೇತ ಕಿತ್ತು ಹಾಕಿದ್ದಾರೆ. ಕರ್ನಾಟಕದಲ್ಲಿ ಯಾವತ್ತೇ ಚುನಾವಣೆ ನಡೆದರೂ ಹಿಂದೂವಿರೋಧಿ ಕಾಂಗ್ರೆಸ್ ಪಕ್ಷವನ್ನು ಸೋಲಿಸುವ ಮತ್ತು ಬಿಜೆಪಿಯನ್ನು ಗೆಲ್ಲಿಸುವ ತಾಕತ್ತು ನಮ್ಮ ಕಾರ್ಯಕರ್ತರಿಗೆ ಇದೆ. ನಮ್ಮ ಕಾರ್ಯಕರ್ತರು ಎದೆಗುಂದುವ ಪ್ರಶ್ನೆಯೇ ಇಲ್ಲ ಎಂದರು.
ಈ ಹಿಂದೂ ವಿರೋಧಿ ಕಾಂಗ್ರೆಸ್ ಸರಕಾರವು ಬಿಡದಿಯಲ್ಲಿ ರೈತವಿರೋಧಿಯಾಗಿ ಕೆಲಸ ಮಾಡುತ್ತಿದೆ ಎಂದು ಟೀಕಿಸಿದರು. ಯಡಿಯೂರಪ್ಪನವರು ಮುಖ್ಯಮಂತ್ರಿಗಳಾಗಿದ್ದಾಗ ರೈತರಪರ ನಿರ್ಣಯಗಳನ್ನು ತೆಗೆದುಕೊಂಡಿದ್ದಲ್ಲದೇ, ಎನ್ಡಿಆರ್ಎಫ್ ನಿಧಿಗೆ ಕಾಯದೇ ಜನರಿಗೆ ಹೆಚ್ಚು ಅನುದಾನ ನೀಡಿದ್ದರು ಎಂದು ವಿವರಿಸಿದರು.
ಬಸವರಾಜ ಬೊಮ್ಮಾಯಿಯವರು ರೈತ ವಿದ್ಯಾನಿಧಿ ಜಾರಿಗೊಳಿಸಿದ್ದರು. ರೈತರ ಪರವಾಗಿ ಆಡಳಿತ ನಡೆಸಿದ್ದರು ಎಂದು ತಿಳಿಸಿದರು. ಶಿವಕುಮಾರ್ ಅವರು ರೈತರ ಬಗ್ಗೆ ಕಾಳಜಿ ಇಲ್ಲದ, ರಿಯಲ್ ಎಸ್ಟೇಟ್ ಕಾಳಜಿ ಇರುವ ಮುಖ್ಯಮಂತ್ರಿ ಎಂದು ಟೀಕಿಸಿದರು.