ನವದೆಹಲಿ, , ಜು.16 (DaijiworldNews/AK): ಭಾರತದಾದ್ಯಂತ ಇರುವ ಇಸ್ರೋದ ವಿವಿಧ ಕೇಂದ್ರಗಳ ಸುಮಾರು 100 ವಿಜ್ಞಾನಿಗಳು ರಾಜೀನಾಮೆ ನೀಡಿದ್ದಾರೆ.

ಗಗನಯಾನದಂತಹ ಮಹತ್ವದ ಪ್ರಮುಖ ರಾಷ್ಟ್ರೀಯ ಯೋಜನೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳು ಮತ್ತು ಎಂಜಿನಿಯರ್ಗಳ ರಾಜೀನಾಮೆ ಹಾಗೂ ಸ್ವಯಂ ನಿವೃತ್ತಿಗೆ ಸಂಬಂಧಿಸಿದ ನಿಯಮಗಳನ್ನು ಕಠಿಣಗೊಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ.
ಬಾಹ್ಯಾಕಾಶ ಇಲಾಖೆ ಜಂಟಿ ಕಾರ್ಯದರ್ಶಿ (ಸಿಬ್ಬಂದಿ) ಎಸ್.ಆರ್. ರಾಜಶೇಖರ್ ಅವರು ಜು.14ರಂದು ಹೊರಡಿಸಿದ ಜ್ಞಾಪನ ಪತ್ರದಲ್ಲಿ, ‘ಇತ್ತೀಚಿನ ದಿನಗಳಲ್ಲಿ, ಪ್ರತಿಷ್ಠಿತ ‘ಗಗನಯಾನ’ ಹಾಗೂ ಇತರ ಪ್ರಮುಖ ಯೋಜನೆಗಳಲ್ಲಿ ಕೆಲಸ ಮಾಡುತ್ತಿರುವವರು ಸೇರಿದಂತೆ, ಇಸ್ರೋದ ಗ್ರೂಪ್ ಎ ವೈಜ್ಞಾನಿಕ/ತಾಂತ್ರಿಕ ಸಿಬ್ಬಂದಿಯಿಂದ ಸ್ವಯಂ ನಿವೃತ್ತಿ ಮತ್ತು ರಾಜೀನಾಮೆಗಾಗಿ ಹೆಚ್ಚಿನ ಸಂಖ್ಯೆಯಲ್ಲಿ ಮನವಿಗಳು ಬರುತ್ತಿವೆ. ಇದು ರಾಷ್ಟ್ರೀಯ ಮಹತ್ವದ ಯೋಜನೆಗಳ ಅನುಷ್ಠಾನದ ಮೇಲೆ ತೀವ್ರ ಪರಿಣಾಮ ಬೀರುತ್ತಿದೆ ಎಂದು ತಿಳಿಸಿದ್ದಾರೆ.
ಅಲ್ಲದೇ ಗಗನಯಾನ ಅಥವಾ ಇತರ ಪ್ರಮುಖ ಯೋಜನೆಗಳು ಪೂರ್ಣಗೊಳ್ಳುವವರೆಗೂ, ಅವುಗಳಲ್ಲಿ ಕೆಲಸ ಮಾಡುತ್ತಿರುವ ಗ್ರೂಪ್ ಎ ವೈಜ್ಞಾನಿಕ ಮತ್ತು ತಾಂತ್ರಿಕ ಸಿಬ್ಬಂದಿಯ ರಾಜೀನಾಮೆ ಮನವಿಗಳನ್ನು ಸ್ವೀಕರಿಸದಂತೆ ಇಸ್ರೋ ಕೇಂದ್ರಗಳ ನಿರ್ದೇಶಕರು ಮತ್ತು ಘಟಕಗಳ ಮುಖ್ಯಸ್ಥರಿಗೆ ಸೂಚಿಸಲಾಗಿದೆ.