ನವದೆಹಲಿ, ಜು. 26 (DaijiworldNews/AK): ಜಂತರ್ ಮಂತರ್ನಲ್ಲಿ 37 ದಿನಗಳ ಕಾಲ ನಡೆದ ಪ್ರತಿಭಟನೆಯನ್ನು ಅಂತ್ಯಗೊಳಿಸಿದ ಒಂದು ದಿನದ ಬಳಿಕ, ಕಾಕ್ರೋಚ್ ಜನತಾ ಪಾರ್ಟಿ ಸಂಸ್ಥಾಪಕ ಅಭಿಜೀತ್ ದೀಪ್ಕೆ ಭಾನುವಾರ ವಿಡಿಯೋ ಸಂದೇಶದ ಮೂಲಕ ತಮ್ಮ ಬೆಂಬಲಿಗರು ಹಾಗೂ ಟೀಕಾಕಾರರಿಗೆ ಕೃತಜ್ಞತೆ ಸಲ್ಲಿಸಿದ್ದಾರೆ. ʻಇದು ಕೇವಲ ಆರಂಭ ಅಷ್ಟೇʼ ಎಂದು ಹೇಳುವ ಮೂಲಕ ಪಕ್ಷದ ಮುಂದಿನ ಹಾದಿಯ ಬಗ್ಗೆ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ರಾಜೀನಾಮೆ ನೀಡಿದ ನಂತರ ಹಾಗೂ ಪ್ರತಿಭಟನಾಕಾರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎಂಬ ಭರವಸೆ ಸೇರಿದಂತೆ ಹಲವು ಬೇಡಿಕೆಗಳಿಗೆ ಕೇಂದ್ರ ಸರ್ಕಾರ ಒಪ್ಪಿಗೆ ಸೂಚಿಸಿದ ಬಳಿಕ ಸಿಜೆಪಿ ತನ್ನ 37 ದಿನಗಳ ಪ್ರತಿಭಟನೆಯನ್ನ ಹಿಂಪಡೆದುಕೊಂಡಿದೆ.
ಈ ಹಿನ್ನೆಲೆ ಮಾತನಾಡಿದ ದೀಪ್ಕೆ, ಹಲವು ದಿನಗಳ ಬಳಿಕ ಯಾವುದೇ ಆತಂಕವಿಲ್ಲದೇ ಮನೆಯಲ್ಲಿ ನೆಮ್ಮದಿಯಿಂದ ನಿದ್ರೆ ಮಾಡಿ ಎದ್ದಿದ್ದೇನೆ. ಏಕೆಂದ್ರೆ ಕಳೆದ 37 ದಿನಗಳು ತಮ್ಮ ತಂಡಕ್ಕೆ ಅತ್ಯಂತ ಸವಾಲಿನ ದಿನಗಳಾಗಿದ್ದವು ಎಂದು ಹೇಳಿದ್ದಾರೆ.
ದೇಶದ ವಿವಿಧ ಭಾಗಗಳಿಂದ ತಮ್ಮ ಚಳವಳಿಗೆ ಬೆಂಬಲ ನೀಡಿದ ಪ್ರತಿಯೊಬ್ಬರಿಗೂ ಹೃತ್ಪೂರ್ವಕ ಧನ್ಯವಾದ ತಿಳಿಸಿದ ದೀಪ್ಕೆ, ʻನಮ್ಮ ಮೇಲೆ ನಂಬಿಕೆ ಇಟ್ಟು ಎಲ್ಲರೂ ಅನುಮಾನ ವ್ಯಕ್ತಪಡಿಸುತ್ತಿದ್ದ ಸಮಯದಲ್ಲೂ ನಮ್ಮ ಜೊತೆ ನಿಂತ ಪ್ರತಿಯೊಬ್ಬರಿಗೂ ನಾನು ಚಿರಋಣಿ. ನಿಮ್ಮ ಬೆಂಬಲವಿಲ್ಲದೇ ಈ ಹೋರಾಟ ಯಶಸ್ವಿಯಾಗುತ್ತಿರಲಿಲ್ಲʼ ಎಂದು ಹೇಳಿದ್ದಾರೆ.
ಅಷ್ಟೇ ಅಲ್ಲದೇ ಪ್ರತಿಭಟನೆ ಮುಗಿದ ಬಳಿಕ ಜಂತರ್ ಮಂತರ್ನಲ್ಲಿ ಉಳಿದಿದ್ದ ಬೆಂಬಲಿಗರನ್ನ ಭೇಟಿಯಾಗಲು ಸಾಧ್ಯವಾಗದಿದ್ದಕ್ಕಾಗಿ ಕ್ಷಮೆಯಾಚಿಸಿದ್ದಾರೆ. ತಮಗೆ ಟೈಫಾಯ್ಡ್ ಕಾಣಿಸಿಕೊಂಡಿದ್ದು, 101 ಡಿಗ್ರಿವರೆಗೆ ಜ್ವರ ಏರಿದ್ದ ಕಾರಣ ಮನೆಗೆ ಮರಳಬೇಕಾಯಿತು ಎಂದು ದೀಪ್ಕೆ ತಿಳಿಸಿದ್ದಾರೆ.
ನೀವು ದೇಶಕ್ಕಾಗಿ ಮಾಡಿದ ಸೇವೆಯನ್ನ ನಾನು ಎಂದಿಗೂ ಮರೆಯುವುದಿಲ್ಲ. ನಿಮ್ಮ ಸಹಕಾರವಿಲ್ಲದೇ ನಾವು ನಮ್ಮ ಗುರಿ ಸಾಧಿಸಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮೆಲ್ಲರಿಗೂ ನನ್ನ ಹೃತ್ಪೂರ್ವಕ ವಂದನೆಗಳು. ನಮ್ಮನ್ನು ಗಂಭೀರವಾಗಿ ತೆಗೆದುಕೊಳ್ಳಲಿಲ್ಲ ಎಂದು ಹೇಳಿದವರು, ನಮ್ಮ ಪ್ರತಿಭಟನೆಯನ್ನು ಪ್ರಶ್ನಿಸಿದವರು ಮತ್ತು ಟೀಕಿಸಿದವರಿಂದಲೇ ನಾವು ಇನ್ನಷ್ಟು ಉತ್ತಮವಾಗಲು ಸಾಧ್ಯವಾಯಿತು. ನಿಮ್ಮ ಪ್ರಶ್ನೆಗಳು ಮತ್ತು ಟೀಕೆಗಳು ನಮ್ಮನ್ನು ಸುಧಾರಿಸಿಕೊಳ್ಳಲು ನೆರವಾದವು. ಅದಕ್ಕಾಗಿಯೇ ನಾವು ನಮ್ಮ ಭರವಸೆಗಳನ್ನು ಈಡೇರಿಸಲು ಸಾಧ್ಯವಾಯಿತು ಎಂದು ಟೀಕಾಕಾರರಿಗೂ ಕೃತಜ್ಞತೆ ಸಲ್ಲಿಸಿದ್ದಾರೆ.
ಮೊದಲ ದಿನದಿಂದಲೇ ನಾನು ಹೇಳುತ್ತಿದ್ದೇನೆ, ಇದು ಕೇವಲ ಆರಂಭ ಮಾತ್ರ. ಕಾಕ್ರೋಚ್ ಜನತಾ ಪಾರ್ಟಿಗೆ ಇನ್ನೂ ಬಹಳ ದೂರದ ಪಯಣ ಬಾಕಿಯಿದೆ. ನಾವು ಖಂಡಿತವಾಗಿಯೂ ಇನ್ನಷ್ಟು ದೊಡ್ಡ ಮಟ್ಟದಲ್ಲಿ ಮುನ್ನಡೆಯುತ್ತೇವೆ. ಇದು ಕೇವಲ ಆರಂಭ ಎಂದು ವಿಡಿಯೋ ಸಂದೇಶದಲ್ಲಿ ಹೇಳಿದ್ದಾರೆ.