ನವದೆಹಲಿ, ಜು. 26 (DaijiworldNews/AA): ಈ ಬಾರಿ ಗಣೇಶ ಚತುರ್ಥಿ ಹಬ್ಬದಂದು ಪ್ರತಿಯೊಬ್ಬರು ನಿಮ್ಮ ಮನೆಗಳಲ್ಲಿ ಸ್ಥಳೀಯ ಮಣ್ಣಿನಿಂದಲೇ ತಯಾರಾದ ಪರಿಸರ ಸ್ನೇಹಿ ಗಣೇಶ ಮೂರ್ತಿಯನ್ನ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕರೆ ನೀಡಿದ್ದಾರೆ.

ಭಾನುವಾರ ಮನ್ ಕಿ ಬಾತ್ನ 136 ನೇ ಸಂಚಿಕೆ ಉದ್ದೇಶಿಸಿ ಮಾತನಾಡಿದ ಅವರು, "ಕಳೆದ ಬಾರಿ ಮನ್ ಕಿ ಬಾತ್ ನಲ್ಲಿ ನಾನು 'ಗಣೇಶ ಹಬ್ಬದ' ಬಗ್ಗೆ ಮಾತನಾಡಿದ್ದು ನಿಮಗೆ ನೆನಪಿರಬಹುದು. ನಾವು ನಮ್ಮ ದೇಶದ ಮಣ್ಣಿನಿಂದಲೇ ತಯಾರಿಸಲಾದ ಗಣೇಶ ಮೂರ್ತಿಗೆ ಪೂಜೆ ಸಲ್ಲಿಸಬೇಕೆಂದು ನಾನು ಮನವಿ ಮಾಡಿದ್ದೆ. ಪಿ.ಒ.ಪಿ. ನಿಂದ ತಯಾರಿಸಲಾದ ಗಣೇಶ ಮೂರ್ತಿಯಾಗಲೀ ಅಥವಾ ವಿದೇಶದಿಂದ ಬಂದ ಗಣೇಶನ ಪ್ರತಿಮೆಯೇ ಆಗಿರಲಿ ಅದರ ಬದಲು ನಾವು ನಮ್ಮದೇ ದೇಶದ ಮಣ್ಣಿನಿಂದ ತಯಾರಿಸಲಾದ ಗಣೇಶನ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಬೇಕು" ಎಂದು ಮನವಿ ಮಾಡಿದ್ದಾರೆ.
"ಈ ವಿಷಯ ಕುರಿತಂತೆ ಅನೇಕರು ನನಗೆ ಸಂದೇಶ ಕಳಿಸಿದ್ದಾರೆ ಮತ್ತು ತಮ್ಮ ಚಿಂತನೆಗಳನ್ನು ತಿಳಿಯಪಡಿಸಿದ್ದಾರೆ. ತಾವು ನನ್ನ ಈ ಮನವಿಯನ್ನು ಪಾಲಿಸುವುದಾಗಿ ತಿಳಿಸಿದ್ದಾರೆ. ಸ್ಥಳೀಯ ಮಣ್ಣಿನಿಂದ ತಯಾರಿಸಲಾಗುವ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಿ ಪೂಜಿಸುವ ಸಂಕಲ್ಪ ಕೈಗೊಂಡಿರುವುದಾಗಿ ತಿಳಿಸಿದ್ದಾರೆ. ಈ ವಿಷಯವನ್ನ ಈಗಾಗಲೇ ಮನ್ ಕಿ ಬಾತ್ನಲ್ಲಿ ಚರ್ಚಿಸಲಾಗಿದೆ ಮತ್ತು ಅದು ಸರಿಯಾದ ಸಮಯದಲ್ಲಿ ಸರಿಯಾದ ಕ್ರಮಗಳನ್ನು ತೆಗೆದುಕೊಳ್ಳಲು ಸಹಾಯ ಮಾಡಿದೆ ಎಂದು ಜನರು ಬರೆದಿದ್ದಾರೆ" ಎಂದು ತಿಳಿಸಿದ್ದಾರೆ.
"ನಾನು ನನ್ನ ವಿನಂತಿಯನ್ನ ಪುನರುಚ್ಚರಿಸುತ್ತೇನೆ. ಈ ಗಣೇಶನ ಹಬ್ಬದಂದೂ ನಿಮ್ಮ ಮನೆಯಲ್ಲಿ ಸ್ಥಳೀಯ ಮಣ್ಣಿನಿಂದ ಮಾಡಿದ ಗಣೇಶನ ವಿಗ್ರಹವನ್ನ ಸ್ಥಾಪಿಸಿ ಮತ್ತು ಅವನನ್ನು ಪೂಜಿಸಿ. ನಿಮ್ಮ ಈ ಪ್ರಯತ್ನವು ಪ್ರಕೃತಿಯನ್ನು ಆರಾಧಿಸುವ ಒಂದು ರೂಪವೂ ಆಗಿರುತ್ತದೆ" ಎಂದಿದ್ದಾರೆ.