ಬೆಂಗಳೂರು, ಜು. 26 (DaijiworldNews/AA): 2020ರಲ್ಲಿ ಈಶಾನ್ಯ ದೆಹಲಿಯಲ್ಲಿ ನಡೆದ ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಮತ್ತು ಶಾರ್ಜೀಲ್ ಇಮಾಮ್ ಪರ ನೀಟ್ ಪ್ರತಿಭಟನೆಯಲ್ಲಿ ಪೋಸ್ಟರ್ ಪ್ರದರ್ಶಿಸಿದ್ದ ಯುವತಿಯ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ.

ಭದ್ರತಾ ಕರ್ತವ್ಯದಲ್ಲಿದ್ದ ಮಹಿಳಾ ಪೊಲೀಸ್ ಅಧಿಕಾರಿಯೊಬ್ಬರು ಉಪ್ಪಾರಪೇಟೆ ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಚೋದನಕಾರಿ ಪೋಸ್ಟರ್ ಪ್ರದರ್ಶಿಸಿದ್ದ ಯುವತಿಯ ವಿರುದ್ಧ ಎಫ್ಐಆರ್ ದಾಖಲಾಗಿದೆ. ಗಲಭೆ ಉದ್ದೇಶದಿಂದ ಪ್ರಚೋದನೆ ನೀಡುವ ಆರೋಪದ ಮೇಲೆ ಯುವತಿ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಬೆಂಗಳೂರಿನ ಫ್ರೀಡಂ ಪಾರ್ಕ್ನಲ್ಲಿ ಜು.24ರಂದು ನಡೆದ ನೀಟ್ ಪ್ರತಿಭಟನೆ ವೇಳೆ ಯುವತಿಯೊಬ್ಬಳು ಗಲಭೆ ಪ್ರಕರಣದ ಆರೋಪಿಗಳಾದ ಉಮರ್ ಖಾಲಿದ್ ಹಾಗೂ ಶಾರ್ಜೀಲ್ ಇಮಾಮ್ ಪರವಾಗಿ ಘೋಷಣೆಗಳಿರುವ ಪೋಸ್ಟರ್ಗಳನ್ನ ಪ್ರದರ್ಶಿಸಿದ್ದಳು. ಜೊತೆಗೆ ʻUkhad Le BLR Policeʼ ಎಂಬ ಬರಹವನ್ನು ಪೋಸ್ಟರ್ನಲ್ಲಿ ಪ್ರದರ್ಶಿಸಿದ್ದಳು. ಆಕೆ ಹಿಡಿದಿದ್ದ ಪೋಸ್ಟರ್ ಭಾರೀ ವಿವಾದ ಸೃಷ್ಟಿಸಿತ್ತು.
ಈ ಪೋಸ್ಟರ್ ಗಮನಿಸಿದ ಸ್ಥಳದಲ್ಲಿದ್ದ ಪೊಲೀಸರು, ಪರಿಸ್ಥಿತಿ ಉದ್ವಿಗ್ನವಾಗದಂತೆ ಪೊಲೀಸರು ತಕ್ಷಣವೇ ಪೋಸ್ಟರ್ಗಳನ್ನ ವಶಪಡಿಸಿಕೊಂಡಿದ್ದರು. ಇದೇ ವೇಳೆ ಅಲ್ಲಿದ್ದ ಇತರ ವಿದ್ಯಾರ್ಥಿಗಳು ಆಕೆಗೆ ಕ್ಲಾಸ್ ತೆಗೆದುಕೊಂಡು, ಪ್ರತಿಭಟನಾ ಸ್ಥಳದಿಂದ ಕಳುಹಿಸಿದ್ದರು. ಇದೀಗ ಈ ಸಂಬಂಧ ಪೊಲೀಸರು ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.