ಹುಬ್ಬಳ್ಳಿ, ಸೆ 10 (DaijiworldNews/SM): ಈ ವರ್ಷದಲ್ಲಿ ಸುರಿದ ಕುಂಭದ್ರೋಣ ಮಳೆಯಿಂದಾಗಿ ರಾಜ್ಯ ತತ್ತರಿಸಿಹೋಗಿದೆ. ಆದರೆ, ರಾಜ್ಯಕ್ಕೆ ಕೇಂದ್ರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಇದು ಪ್ರತಿ ಪಕ್ಷಗಳಿಗೆ ದಾಳವಾಗಿತ್ತು. ಆದರೆ, ಇದೀಗ ಕೇಂದ್ರದಿಂದ ಅನುದಾನ ಬಿಡುಗಡೆಗೊಳ್ಳುವ ಲಕ್ಷಣಗಳು ಗೋಚರಿಸುತ್ತಿವೆ. ಶೀಘ್ರದಲ್ಲೇ ಕೇಂದ್ರದಿಂದ ನೆರೆ ಪರಿಹಾರ ಅನುದಾನ ಬಿಡುಗಡೆಯಾಗಲಿದೆ ಎಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ ಅವರು, ತಕ್ಷಣಕ್ಕೆ ಬರ ಪರಿಹಾರವನ್ನು ಬಿಡುಗಡೆಗೊಳಿಸಲು, ಬೇರೆ ಅಭಿವೃದ್ದಿ ಕಾರ್ಯಗಳ ಹಣವನ್ನು ಬಳಸಿಕೊಳ್ಳಲು ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಬೆಳಗಾವಿ ಜಿಲ್ಲೆಯಲ್ಲಿನ ನಿರಾಶ್ರಿತರಿಗೆ ತಕ್ಷಣ ಶೆಡ್ ಹಾಕಲು ಸೂಚಿಸಿದ್ದೇನೆ. ಶಾಸಕ ಉಮೇಶ ಕತ್ತಿ ವೈಯಕ್ತಿಕ ಕಾರಣದಿಂದ ತಮ್ಮ ಭೇಟಿಗೆ ಬಂದಿರಲಿಲ್ಲ. ಅವರ ಜೊತೆ ಫೋನ್ ನಲ್ಲಿ ಮಾತನಾಡಿದ್ದೇನೆ ಎಂದರು.
ಇನ್ನು ಬಿಜೆಪಿ ರಾಜ್ಯಾಧ್ಯಕ್ಷ ನಳಿನ ಕುಮಾರ ಕಟೀಲ ಕುರಿತು ಸಿದ್ದರಾಮಯ್ಯ ನೀಡಿರುವ ಹೇಳಿಕೆಗೆ ತಾನು ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಅವರು ತಿಳಿಸಿದ್ದಾರೆ.