ಕೋಲಾರ, ಸೆ 10 (DaijiworldNews/SM): ಕಳೆದವಾರವಷ್ಟೇ ಗಣೇಶೋತ್ಸವವನ್ನು ಅದ್ದೂರಿಯಿಂದ ಆಚರಿಸಲಾಗಿತ್ತು. ಕೆಲವು ಪ್ರದೇಶಗಳಲ್ಲಿ ಗಣೇಶನ ವಿಸರ್ಜನೆ ಬಳಿಕ ನಡೆಸಲಾಗಿದೆ. ಜಿಲ್ಲೆಯ ಕೆಜಿಎಫ್ ತಾಲ್ಲೂಕಿನ ಮರಿಕುಂಟೆಯಲ್ಲಿ ಗಣೇಶ ಮೂರ್ತಿ ವಿಸರ್ಜನೆ ಸಂದರ್ಭ ಆರು ಮಕ್ಕಳು ನೀರುಪಾಲಾಗಿರುವ ಘಟನೆ ನಡೆದಿದೆ.
ನಾಲ್ಕು ಜನ ಹೆಣ್ಣು ಮಕ್ಕಳು ಸೇರಿದಂತೆ ಒಟ್ಟು ಆರು ಮಕ್ಕಳು ನೀರುಪಾಲಾಗಿದ್ದಾರೆ. ಮೃತ ಎಲ್ಲಾ ಮಕ್ಕಳು 14 ವರ್ಷಕ್ಕಿಂತ ಕೆಳಗಿನವರಾಗಿದ್ದಾರೆ. ಮೃತ ಮಕ್ಕಳನ್ನು ರಕ್ಷಿತಾ, ತೇಜಸ್ವಿ, ವೀಣಾ, ವೈಷ್ಣವಿ, ರೋಹಿತ್, ಧನುಷ್ ಎಂದು ಗುರುತಿಸಲಾಗಿದೆ. ಮಕ್ಕಳು ಗಣೇಶನ ವಿಗ್ರಹವನ್ನು ಕುಂಟೆಯೊಂದರಲ್ಲಿ ಬಿಡಲು ಊರ ಹೊರಕ್ಕೆ ತೆರಳಿದ್ದರು. ಕುಂಟೆಯ ಒಳಗೆ ಜೆಸಿಬಿ ಬಳಸಿ ಮಣ್ಣು ಹೊರತೆಗೆದು ಆಳ ಮಾಡಲಾಗಿತ್ತು. ಈ ಬಗ್ಗೆ ಅರಿವಿಲ್ಲದೆ ತೆರಳಿದ ಪುಟಾಣಿಗಳು ಕುಂಟೆಗೆ ಇಳಿದು ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ವಿದ್ಯಾರ್ಥಿಗಳ ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.