ಬೆಂಗಳೂರು, ಸೆ.11(Daijiworld News/SS): ಜಾಥಾ, ಸಭೆ ಸಂಪೂರ್ಣ ಶಾಂತಿಯುತವಾಗಿರಲಿ. ಯಾವುದೇ ಕಾರಣಕ್ಕೂ ಶಾಂತಿ ಭಂಗಕ್ಕೆ ಅವಕಾಶ ನೀಡಬೇಡಿ ಎಂದು ಡಿ.ಕೆ. ಶಿವಕುಮಾರ್ ಮನವಿ ಮಾಡಿದ್ದಾರೆ.
ಡಿ.ಕೆ. ಶಿವಕುಮಾರ್ ಅವರನ್ನು ಜಾರಿ ನಿರ್ದೇಶನಾಲಯ ಬಂಧಿಸಿದ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಬೃಹತ್ ಪ್ರತಿಭಟನಾ ರ್ಯಾಲಿಗೆ ಕರೆ ನೀಡಲಾಗಿದೆ. ಈ ಕುರಿತು ಟ್ಟೀಟ್ ಮಾಡಿರುವ ಅವರು, ಸಾರ್ವಜನಿಕ ಆಸ್ತಿ-ಪಾಸ್ತಿಗೆ ಹಾನಿ ಮಾಡಬೇಡಿ. ಅವರ ನೆಮ್ಮದಿಗೆ ಭಂಗ ತರಬೇಡಿ. ಈ ಸಂದರ್ಭವನ್ನು ದುರ್ಬಳಕೆ ಮಾಡಿಕೊಳ್ಳಲು ಎದುರಾಳಿಗಳಿಗೆ ಅವಕಾಶ ಮಾಡಿಕೊಡಬೇಡಿ. ಇದು ನನ್ನ ಕಳಕಳಿಯ ಮನವಿ ಎಂದು ಹೇಳಿದ್ದಾರೆ.
ನಾನು ಮತ್ತೊಮ್ಮೆ ಸಾರಿ, ಸಾರಿ ಹೇಳುತ್ತೇನೆ. ನಿಮ್ಮ ಗೌರವ-ಘನತೆಗೆ ಧಕ್ಕೆ ತರುವಂಥ ಯಾವುದೇ ಕೆಲಸವನ್ನು ನಾನು ಮಾಡಿಲ್ಲ, ಮಾಡುವುದೂ ಇಲ್ಲ. ನನ್ನ ಮೇಲೆ ನೀವಿಟ್ಟಿರುವ ನಂಬಿಕೆ ಉಳಿಸಿಕೊಳ್ಳಲು ಬದ್ಧನಾಗಿದ್ದೇನೆ. ನನಗೆ ದೇವರು, ಈ ನೆಲದ ಕಾನೂನಿನ ಮೇಲೆ ಸಂಪೂರ್ಣ ವಿಶ್ವಾಸವಿದೆ. ಜತೆಗೆ ನಿಮ್ಮ ಹಾರೈಕೆಯೂ ಇದೆ ಎಂದು ಹೇಳಿದ್ದಾರೆ.
ಈ ಎಲ್ಲ ಸಂಕಷ್ಟಗಳಿಂದ ನಾನು ಪಾರಾಗಿ ಬರುತ್ತೇನೆ. ನಿಮ್ಮ ನಡುವೆ ಇದ್ದುಕೊಂಡೇ ಎಂದಿನಂತೆ ಜನಸೇವೆಯನ್ನು ಮುಂದುವರೆಸಿಕೊಂಡು ಹೋಗುತ್ತೇನೆ” ಎಂದು ಟ್ವೀಟ್ ಮಾಡಿದ್ದಾರೆ.