ಮೈಸೂರು, ಸೆ 11 (Daijiworld News/MSP): ಹಿಂದೂ ಧರ್ಮ ದೇಶದಲ್ಲಿ ಉಳಿದುಕೊಂಡರೆ ಮಾತ್ರ ಭಾರತ ದೇಶವು ಅಖಂಡವಾಗಿ ಉಳಿಯಲು ಸಾಧ್ಯ ಎಂದು ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಮೈಸೂರಿನಲ್ಲಿ ಹೇಳಿದರು.
ಮಂಗಳವಾರ ಜನಜಾಗರಣ ಟ್ರಸ್ಟ್ ವತಿಯಿಂದ ಮಂಗಳವಾರ ನಗರದಲ್ಲಿ ಏರ್ಪಡಿಸಿದ್ದ ಉಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಆಶೀರ್ವಚನ ನೀಡಿ ಮಾತನಾಡಿದ ಅವರು, ಅಸಮಾನತೆಯನ್ನು ಬಿಟ್ಟು ಎಲ್ಲರೂ ಕೂಡಾ ಒಗ್ಗಟ್ಟಾಗಿ ಹಿಂದೂ ಧರ್ಮವನ್ನು ರಾಷ್ಟ್ರ ಧರ್ಮವನ್ನಾಗಿ ಮಾಡಬೇಕು ಎಂದು ಉಡುಪಿ ಪೇಜಾವರ ಮಠದ ಶ್ರೀ ವಿಶ್ವೇಶತೀರ್ಥ ಶ್ರೀಪಾದರು ಹೇಳಿದರು.
ಪ್ರಪಂಚದ ಬಹುತೇಕ ದೇಶಗಳಲ್ಲಿ ಇಸ್ಲಾಂ ಮತ್ತು ಕ್ರೈಸ್ತ ಧರ್ಮಗಳಿವೆ. ಆದೇ ಧರ್ಮವನ್ನು ದೇಶದ ಧರ್ಮಗಳೆಂದು ಆ ರಾಷ್ಟ್ರಗಳು ಘೋಷಿಸಿದೆ . ಆದರೆ ನಮ್ಮ ಹಿಂದೂ ಧರ್ಮ ಹಿಂದೂಸ್ತಾನವನ್ನು ಬಿಟ್ಟರೆ ಬೇರೆಲ್ಲೂ ಇಲ್ಲ. ವಿಪರ್ಯಾಸವೆಂದರೆ ಹಿಂದೂ ಧರ್ಮವನ್ನು ನಮ್ಮ ರಾಷ್ಟ್ರ ಧರ್ಮವೆಂದು ನಾವು ಇಲ್ಲಿಯವರೆಗೂ ಒಪ್ಪಿಕೊಂಡಿಲ್ಲ. ಕೆಲ ಬುದ್ಧಿಜೀವಿಗಳಿಗಂತೂ ಹಿಂದೂ ಧರ್ಮವನ್ನು ಟೀಕಿಸುವುದೇ ಕೆಲಸವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.