ಹಾಸನ, ಸೆ.11(Daijiworld News/SS): ಚನ್ನರಾಯಪಟ್ಟಣ ತಾಲ್ಲೂಕಿನ ಅಗಸರಹಳ್ಳಿಯಲ್ಲಿ ವಿದ್ಯುತ್ ಅವಘಡ ಸಂಭವಿಸಿದ್ದು, ಒಂದೇ ಕುಟುಂಬದ ಮೂವರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.
ಭಾಗ್ಯಮ್ಮ(49) ಮತ್ತು ಮಕ್ಕಳಾದ ದಾಕ್ಷಾಯಿಣಿ(30), ದಯಾನಂದ(34) ಮೃತ ದುರ್ದೈವಿಗಳು. ಬಟ್ಟೆ ಒಣ ಹಾಕುವಾಗ ವಿದ್ಯುತ್ ಶಾಕ್ ಹೊಡೆದ ಪರಿಣಾಮ ಈ ದುರ್ಘಟನೆ ಸಂಭವಿಸಿದೆ.
ಮನೆ ಬಳಿ ಇರುವ ವಿದ್ಯುತ್ ಕಂಬಕ್ಕೆ ಬಟ್ಟೆ ಒಣಹಾಕಲು ತಂತಿ ಕಟ್ಟಲಾಗಿತ್ತು. ಬೆಳ್ಳಂಬೆಳಗ್ಗೆ ಈ ತಂತಿಯ ಮೇಲೆ ಬಟ್ಟೆ ಒಣಹಾಕಲು ದಾಕ್ಷಾಯಿಣಿ ಹೋಗಿದ್ದರು. ಈ ವೇಳೆ ವಿದ್ಯುತ್ ಕಂಬದಿಂದ ತಂತಿಗೆ ಕರೆಂಟ್ ಹರಿದು, ದಾಕ್ಷಾಯಿಣಿಗೆ ಶಾಕ್ ಹೊಡೆದಿದೆ. ಈ ವೇಳೆ ತಂಗಿ ಒದ್ದಾಡುತ್ತಿದ್ದುದನ್ನು ಕಂಡ ದಯಾನಂದ ಆಕೆಯನ್ನು ಹಿಡಿಯಲು ಹೋದಾಗ ಆತನಿಗೂ ಶಾಕ್ ಹೊಡೆದಿದೆ. ಬಳಿಕ ತಾಯಿ ಮಕ್ಕಳನ್ನು ಶಾಕ್ಯಿಂದ ತಪ್ಪಿಸಲು ಹೋಗಿ ಅವರಿಗೂ ವಿದ್ಯುತ್ ಶಾಕ್ ತಗುಲಿದೆ. ಪರಿಣಾಮ ಮೂವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸ್ಥಳಕ್ಕೆ ಚನ್ನರಾಯಪಟ್ಟಣ ಗ್ರಾಮಾಂತರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.