ನವದೆಹಲಿ, ಸೆ.12(Daijiworld News/SS): ಜನರ ಜೀವ ರಕ್ಷಣೆ ಹಾಗೂ ರಸ್ತೆ ಅಪಘಾತ ನಿಯಂತ್ರಿಸುವ ಉದ್ದೇಶದಿಂದ ನೂತನ ಸಂಚಾರ ನಿಯಮಗಳನ್ನು ಜಾರಿ ತರಲಾಗಿದೆ ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಅಪಘಾತ ತಡೆಯಲು ಮತ್ತು ಜನರ ಜೀವವನ್ನು ರಕ್ಷಿಸುವುದಕ್ಕಾಗಿ ಸಂಚಾರಿ ನಿಯಮ ಉಲ್ಲಂಘನೆಗೆ ದುಬಾರಿ ದಂಡ ವಿಧಿಸಲಾಗುತ್ತಿದೆ. ಇದರ ಉದ್ದೇಶ ಹಣ ಸಂಗ್ರಹಿಸುವುದಲ್ಲ. ದೇಶದಲ್ಲಿ ಅತಿ ಹೆಚ್ಚು ಜನ ರಸ್ತೆ ಅಪಘಾತಗಳಲ್ಲಿ ಸಾವನ್ನಪ್ಪುತ್ತಿದ್ದಾರೆ. ದೇಶಾದ್ಯಂತ 1.20 ಲಕ್ಷ ಜನರು ಅಪಘಾತಗಳಲ್ಲಿ ಜೀವಬಿಡುತ್ತಿದ್ದಾರೆ. ಹೀಗಾಗಿ ನೂತನ ಸಂಚಾರ ನಿಯಮ ತರಲಾಗಿದೆ ಎಂದು ಹೇಳಿದರು.
ಜನರ ಜೀವ ರಕ್ಷಣೆ ಹಾಗೂ ರಸ್ತೆ ಅಪಘಾತ ನಿಯಂತ್ರಣವೇ ನಮ್ಮ ಮುಖ್ಯ ಉದ್ದೇಶ. ಕಾನೂನು ಉಲ್ಲಂಘಿಸದ ಜನರು ಭಯಪಡುವ ಅವಶ್ಯಕತೆಯಿಲ್ಲ. ತಪ್ಪು ಮಾಡದಿದ್ದರೆ ಅವರು ಯಾವುದೇ ದಂಡ ತೆರಬೇಕಿಲ್ಲ. ಸೆ.1ರಿಂದ ಜಾರಿಗೆ ಬಂದಿರುವ ಹೊಸ ಮೋಟಾರು ವಾಹನ ಕಾಯ್ದೆ(ತಿದ್ದುಪಡಿ) ಅಳವಡಿಕೆ ಆಯಾ ರಾಜ್ಯಗಳಿಗೆ ಬಿಟ್ಟಿದ್ದು, ರಾಜ್ಯ ಸರ್ಕಾರಗಳು ದಂಡದ ಮೊತ್ತವನ್ನು ಪರಿಷ್ಕರಿಸಬಹುದು ಎಂದು ಹೇಳಿದ್ದಾರೆ.
ಸದ್ಯ ಗುಜರಾತ್ ರಾಜ್ಯ ಸರ್ಕಾರ, ದಂಡದ ಪ್ರಮಾಣವನ್ನು ಕಡಿಮೆ ಮಾಡುವುದಾಗಿ ಘೋಷಿಸಿದೆ. ಕರ್ನಾಟಕ ಸರ್ಕಾರ ಕೂಡ ದಂಡದ ಪ್ರಮಾಣ ಇಳಿಕೆ ಮಾಡುವುದಾಗಿ ತಿಳಿಸಿದೆ.