ನವದೆಹಲಿ, ಸೆ.12(Daijiworld News/SS): ಭಾರತದಲ್ಲಿ ವಿಧ್ವಂಸಕ ಕೃತ್ಯ ನಡೆಸುವ ಉದ್ದೇಶದಿಂದ ಪಾಕಿಸ್ತಾನ 7 ಉಗ್ರ ನೆಲೆಗಳನ್ನು ಗಡಿಭಾಗದಲ್ಲಿ ಸಕ್ರಿಯಗೊಳಿಸಿದೆ ಎಂದು ಗುಪ್ತಚರ ಇಲಾಖೆ ಮಾಹಿತಿ ನೀಡಿದೆ.
ಪುಲ್ವಾಮಾ ದಾಳಿ ಬಳಿಕ ಭಾರತದ ಮೇಲಿನ ಪ್ರತೀಕಾರ ಮತ್ತು ಅಂತಾರಾಷ್ಟ್ರೀಯ ಮಟ್ಟದ ತನಿಖೆಯ ಭಯದಿಂದ ಉಗ್ರರ ನೆಲೆಗಳನ್ನು ಭಾರತದ ಗಡಿ ಭಾಗದಿಂದ ಸ್ಥಳಾಂತರಿಸಿದ್ದ ಪಾಕಿಸ್ತಾನ ಇದೀಗ ಉಗ್ರರನ್ನು ಮತ್ತೆ ಗಡಿ ಭಾಗಕ್ಕೆ ಕರೆಸಿಕೊಂಡಿದೆ. ಇದರಲ್ಲಿ ಅಫ್ಘಾನಿಸ್ತಾನ ಮತ್ತು ಪಶ್ತೂನ್ ಪ್ರಾಂತ್ಯದ ಉಗ್ರರೂ ಇದ್ದಾರೆ ಎಂದು ಗುಪ್ತಚರ ಇಲಾಖೆ ತಿಳಿಸಿದೆ.
ಒಟ್ಟು 275 ಉಗ್ರರು ಭಾರತದೊಳಕ್ಕೆ ಬರಲಿದ್ದಾರೆ ಎಂಬ ಮಾಹಿತಿ ದೊರೆತಿದ್ದು, ಗುರೆಜ್ನಿಂದ 80, ಮಚ್ಚಾಲ್ನಿಂದ 60, ಕಾರ್ನಹ್ನಿಂದ 50, ಕೇರನ್ನಿಂದ 40, ಉರಿಯಿಂದ 20, ನವ್ಗಾಂನಿಂದ 15 ಮತ್ತು ರಾಮ್'ಪುರದಿಂದ 10 ಉಗ್ರರು ಸಜ್ಜಾಗಿದ್ದಾರೆ ಎನ್ನಲಾಗಿದೆ.
ಗುಪ್ತಚರ ಇಲಾಖೆ ನೀಡಿರುವ ದಾಖಲೆಗಳ ಪ್ರಕಾರ, ಪಾಕಿಸ್ತಾನ ಸೇನೆ ಮತ್ತು ಪಾಕ್ ಗುಪ್ತಚರ ದಳ ಐಎಸ್ಐ ಗಡಿ ಭಾಗದಲ್ಲಿ ಉಗ್ರರ ಲಾಂಚ್ಪ್ಯಾಡ್ ರೂಪಿಸಿವೆ ಎಂದು ತಿಳಿದುಬಂದಿದೆ.