ಪಶ್ಚಿಮ ಬಂಗಾಳ, ಸೆ 12 (Daijiworld News/RD): ದೇಶಾದ್ಯಂತ ನೂತನ ಮೋಟರ್ ವಾಹನ ಕಾಯ್ದೆ ಜಾರಿಗೊಳಿಸಿದ್ದು, ಈಗಾಗಲೇ ಸಂಚಾರಿ ನಿಯಮ ಉಲ್ಲಂಘಿಸಿದವರಿಗೆ ಭಾರೀ ದಂಡ ವಸೂಲಿ ಮಾಡುತ್ತಿದ್ದಾರೆ. ಇದೆಲ್ಲದರ ನಡುವೆ ಪಶ್ಚಿಮ ಬಂಗಾಳದಲ್ಲಿ ಈ ಕಾಯ್ದೆಯನ್ನು ಜಾರಿಗೊಳಿಸುವುದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇಂದ್ರ ಸರ್ಕಾರದ ನೂತನ ಮೋಟರ್ ವಾಹನ ಕಾಯ್ದೆನ್ನು ರಾಜ್ಯದಲ್ಲಿ ಜಾರಿಗೊಳಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಬುಧವಾರ ಹೇಳಿದ್ದಾರೆ.
ಹೊಸ ಸಂಚಾರಿ ನಿಯಮದಿಂದ ಈಗಾಗಲೇ ಭಾರೀ ದಂಡ ವಿಧಿಸುತ್ತಿದ್ದು, ತುಂಬಾ ಪರಿಣಾಮಕಾರಿಯಾಗಿ ಪ್ರಭಾವ ಬೀರುತ್ತಿದೆ. ಇದು ಕಠಿಣ ಕಾನೂನು ಕ್ರಮವಾಗಿದೆ. ಈ ಕಾಯ್ದೆಯನ್ನು ನಾವು ವಿರೋಧದಿಸುತ್ತೇವೆ ಎಂದು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಹೇಳಿದ್ದಾರೆ. ನಾವು ಈ ಹಿಂದೆಯೇ ಸಂಸತ್ತಿನಲ್ಲಿ ಮೋಟರ್ ವಾಹನ ಕಾಯ್ದೆ ತಿದ್ದುಪಡಿಯನ್ನು ವಿರೋಧಿಸಿದ್ದೇವೆ. ಈಗ ಅದನ್ನು ಜಾರಿಗೊಳಿಸಿದರೆ ಸಾಮಾನ್ಯ ಜನರ ಭಾವನೆಗಳಿಗೆ ಧಕ್ಕೆಯಾಗುತ್ತದೆ ಎಂದು ಪಶ್ಚಿಮ ಬಂಗಾಳ ಸಿಎಂ ಹೇಳಿದ್ದಾರೆ.
ಎಲ್ಲಾ ಸಮಸ್ಯೆಗಳಿಗೂ ದಂಡವೇ ಪರಿಹಾರ ಅಲ್ಲ. ಈ ವಿಚಾರವನ್ನು ಮಾನವೀಯ ದೃಷ್ಟಿಯಿಂದಲೂ ನೋಡಬೇಕಾಗುತ್ತದೆ, ದೇಶದಲ್ಲಿ ಈ ಕಾನೂನು ಆತಂಕಾರಿಯಾಗಿ ಬೆಳವಣಿಗೆ ಆಗುತ್ತಿದೆ ಎಂದು ದೀದಿ ಹೇಳಿದ್ದಾರೆ.