ನವದೆಹಲಿ, ಸೆ 12 (Daijiworld News/RD): ಅಕ್ರಮ ಹಣಕಾಸು ವರ್ಗಾವಣೆ ಆರೋಪದಡಿಯಲ್ಲಿ ಜಾರಿ ನಿರ್ದೇಶನಾಲಯ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಬಂಧಿಸಿದ್ದಾರೆ. ಇದೀಗ ಬಂಡವಾಳ ಹೂಡಿಕೆ ವಿಚಾರವಾಗಿ ಇಡಿ ಅಧಿಕಾರಿಗಳು ಡಿ.ಕೆ.ಶಿವಕುಮಾರ್ ಅವರ ಮಗಳು ಐಶ್ವರ್ಯಾಗೆ ಸಮನ್ಸ್ ನೀಡಿದ್ದು, ಇಂದು ದೆಹಲಿಯಲ್ಲಿ ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ.
ದೆಹಲಿಯಲ್ಲಿ ಇಡಿ ಮುಖ್ಯ ಕಚೇರಿ ಇದ್ದು, ಅಲ್ಲಿ ಇಂದು ವಿಚಾರಣೆ ನಡೆಯಲಿದೆ. ಐಶ್ವರ್ಯಾಗೆ ಅಜ್ಜಿ ಗೌರಮ್ಮ ಕೊಟ್ಟಿದ್ದ ಆಸ್ತಿ-ಹಣದ ಬಗ್ಗೆ, 2001ರಲ್ಲಿ ಉತ್ತರಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2002ರಲ್ಲಿ ಹೊಸಕೆರೆಹಳ್ಳಿಯಲ್ಲಿ 3 ಎಕರೆ ಜಮೀನು ಗಿಫ್ಟ್ ಡೀಡ್, 2018 ಜೂನ್ನಲ್ಲಿ ಗೌರಮ್ಮ ಅಕೌಂಟ್ನಿಂದ ಐಶ್ವರ್ಯಾ ಖಾತೆಗೆ 3 ಕೋಟಿ ರೂ. ಹಣ ವರ್ಗಾವಣೆ, ಸಿಂಗಲ್ ಟ್ರ್ಯಾಜಕ್ಷನ್ ಮೂಲಕ ಪ್ರತಿಷ್ಠಿತ ಬಿಲ್ಡರ್ನಿಂದ ಐಶ್ವರ್ಯ ಖಾತೆಗೆ 193 ಕೋಟಿ ಹಣ ವರ್ಗಾವಣೆ, ಐಶ್ವರ್ಯಾ ಖಾತೆಯಿಂದ ಕೆಫೆ ಕಾಫಿ ಡೇಗೆ 20 ಕೋಟಿ ರೂ. ವರ್ಗಾವಣೆ, ಬಳಿಕ ಕೆಫೆ ಕಾಫಿ ಡೇಯಿಂದ ಐಶ್ವರ್ಯಾ ಖಾತೆಗೆ 20 ಕೋಟಿ ರೂ. ವಾಪಸ್ ಹೋಗಿರುವ ಬಗ್ಗೆ ಈ ಎಲ್ಲ ವಿಚಾರವಾಗಿ ಇ.ಡಿ. ಅಧಿಕಾರಿಗಳು ವಿಚಾರಣೆ ನಡೆಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಸಮನ್ಸ್ ಜಾರಿ ಮಾಡಿ ಪ್ರಶ್ನೆಗಳಿಗೆ ಸರಿಯಾದ ಉತ್ತರ ನೀಡದ್ದಕ್ಕೆ ಈಗಾಗಲೇ ಡಿಕೆ ಶಿವಕುಮಾರ್ ಬಂಧನಕ್ಕೆ ಒಳಗಾಗಿದ್ದರು. ಈಗ ಪುತ್ರಿಗೂ ಸಮನ್ಸ್ ಜಾರಿಯಾಗಿದ್ದು ಸರಿಯಾದ ಉತ್ತರ ನೀಡದೇ ಇದ್ದರೆ ಐಶ್ವರ್ಯಗೂ ಬಂಧನದ ಭೀತಿ ಎದುರಾಗಬಹುದು.