ಬೆಂಗಳೂರು, ಆ. 16 (DaijiworldNews/TA): ವಾಹನಗಳ ಮಾಲಿನ್ಯ ಪರೀಕ್ಷೆ ಮತ್ತು ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರ (PUCC) ವಿತರಣೆಯಲ್ಲಿ ಪಾರದರ್ಶಕತೆ ಹಾಗೂ ನಿಯಮ ಪಾಲನೆ ಖಚಿತಪಡಿಸಲು ಸಾರಿಗೆ ಇಲಾಖೆ ಕಠಿಣ ನಿರ್ದೇಶನಗಳನ್ನು ಹೊರಡಿಸಿದೆ. ಶುಲ್ಕ ಪರಿಷ್ಕರಣೆಯ ಜೊತೆಗೆ ಮಾಲಿನ್ಯ ಪರೀಕ್ಷಾ ಕೇಂದ್ರಗಳು ಕಡ್ಡಾಯವಾಗಿ ಪಾಲಿಸಬೇಕಾದ ಹಲವು ನಿಯಮಗಳನ್ನು ಇಲಾಖೆ ಸ್ಪಷ್ಟಪಡಿಸಿದೆ.

ಮಾಲಿನ್ಯ ಪರೀಕ್ಷೆಗೆ ಬಳಸುವ ಗ್ಯಾಸ್ ಅನಾಲೈಸರ್ಗಳನ್ನು ನಿಯಮಿತವಾಗಿ ಕ್ಯಾಲಿಬ್ರೇಷನ್ ಮಾಡುವುದು ಕಡ್ಡಾಯವಾಗಿದೆ. ಅಲ್ಲದೆ, ಉಪಕರಣದ ಕೊನೆಯ ಕ್ಯಾಲಿಬ್ರೇಷನ್ ದಿನಾಂಕವನ್ನು ವಾಹನ ಮಾಲೀಕರಿಗೆ ಸ್ಪಷ್ಟವಾಗಿ ಕಾಣುವ ರೀತಿಯಲ್ಲಿ ಕೇಂದ್ರದಲ್ಲಿ ಪ್ರದರ್ಶಿಸಬೇಕು.
PUCC ಪ್ರಮಾಣಪತ್ರದಲ್ಲಿ ಕೈಬರಹದ ನಮೂದುಗಳಿಗೆ ಸಂಪೂರ್ಣ ನಿಷೇಧ ಹೇರಲಾಗಿದೆ. ಕೇಂದ್ರ ಮೋಟಾರು ವಾಹನ ನಿಯಮಗಳು-1989ರ ರೂಲ್ 115ರಲ್ಲಿ ನಿಗದಿಪಡಿಸಿರುವ ಮಿತಿಯೊಳಗೆ ವಾಹನದ ಹೊರಸೂಸುವಿಕೆ ಇರುವುದನ್ನು ಖಚಿತಪಡಿಸಿಕೊಂಡ ಬಳಿಕವೇ PUCC ಪ್ರಮಾಣಪತ್ರ ನೀಡಬೇಕು. ಇನ್ನು ಪ್ರಮಾಣಪತ್ರದಲ್ಲಿ ಮಾನ್ಯತಾ ಅವಧಿ ಮತ್ತು ಹೋಲೋಗ್ರಾಂ ಕಡ್ಡಾಯವಾಗಿದ್ದು, ಭಾರತ್ ಸ್ಟೇಜ್-IV ಹಾಗೂ ಭಾರತ್ ಸ್ಟೇಜ್-VI ವಾಹನಗಳಿಗೆ ನೀಡುವ PUCC ಪ್ರಮಾಣಪತ್ರವು 12 ತಿಂಗಳವರೆಗೆ ಮಾನ್ಯವಾಗಿರಲಿದೆ.
ಮಾಲಿನ್ಯ ಪರೀಕ್ಷಾ ಕೇಂದ್ರಗಳು ಪರೀಕ್ಷೆ ನಡೆಸಲು ಹಾಗೂ ಉಪಕರಣಗಳ ನಿರ್ವಹಣೆಗೆ ಅಗತ್ಯವಿರುವ ಸ್ಥಳ ಮತ್ತು ಮೂಲಸೌಕರ್ಯ ಹೊಂದಿರಬೇಕು. ಜೊತೆಗೆ ಕೇಂದ್ರದ ಪರವಾನಗಿಯನ್ನು ಗ್ರಾಹಕರಿಗೆ ಸುಲಭವಾಗಿ ಕಾಣುವ ಸ್ಥಳದಲ್ಲಿ ಪ್ರದರ್ಶಿಸುವುದು ಕಡ್ಡಾಯ ಎಂದು ಸಾರಿಗೆ ಇಲಾಖೆ ತಿಳಿಸಿದೆ. ಹೊಸ ನಿರ್ದೇಶನಗಳ ಮೂಲಕ ಮಾಲಿನ್ಯ ಪರೀಕ್ಷಾ ಪ್ರಕ್ರಿಯೆಯಲ್ಲಿ ಅಕ್ರಮ ಹಾಗೂ ಲೋಪಗಳಿಗೆ ಕಡಿವಾಣ ಹಾಕಿ, ವಾಹನಗಳ ಹೊರಸೂಸುವಿಕೆ ನಿಯಂತ್ರಣವನ್ನು ಮತ್ತಷ್ಟು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಉದ್ದೇಶವನ್ನು ಇಲಾಖೆ ಹೊಂದಿದೆ.