ತಮಿಳುನಾಡು, ಸೆ 12 (Daijiworld News/MSP): ಮಹೀಂದ್ರ ಮೋಟರ್ ಮಾಲೀಕ ಆನಂದ್ ಮಹೀಂದ್ರಾ ಅವರು ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದು, ಟ್ವಿಟ್ಟರ್ ಮೂಲಕ ಸಾಕಷ್ಟು ವಿಷಯಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಹೀಗಾಗಿ ಸದಾ ಸುದ್ದಿಯಲ್ಲಿರುವ ಆನಂದ್ ಮಹೀಂದ್ರಾ ಈ ಬಾರಿ ಸುದ್ದಿಯಾಗಿದ್ದು ವೃದ್ದೆಯೊಬ್ಬರಿಗೆ ಸಹಾಯ ಮಾಡುವ ಮೂಲಕ. ಹೌದು ಹಲವರಿಗೆ ಸಹಾಯ ಹಸ್ತ ಚಾಚಿರುವ ಆನಂದ್ ಮಹೀಂದ್ರಾ 80 ವರ್ಷದ ಅಜ್ಜಿಯೊಬ್ಬರು ಮಾಡುತ್ತಿರುವ ಉದ್ಯಮದ ಮೇಲೆ ಹೂಡಿಕೆ ಮಾಡಲು ಮುಂದೆ ಬಂದಿದ್ದಾರೆ.
ಇತ್ತೀಚೆಗೆ ತಮಿಳುನಾಡಿನ ಪೇರು ಬಳಿಯ ವೇದಿವೆಲಂಪಾಲಯಂ ಎಂಬ ಹಳ್ಳಿಯಲ್ಲಿ ವಾಸವಾಗಿರುವ ಅಜ್ಜಿಯೊಬ್ಬರ ವಿಡಿಯೋ ವೈರಲ್ ಆಗಿತ್ತು. 80 ವರ್ಷದ ಕಮಲಾದಲ್ ಅವರು ಚಟ್ನಿ ಹಾಗೂ ಸಾಂಬಾರ್ ಜೊತೆ 1 ರೂಪಾಯಿಗೆ ಒಂದು ಇಡ್ಲಿಯನ್ನ ಮಾರಾಟ ಮಾಡುತ್ತಿದ್ದಾರೆ. ಇವರು ಇದೇ ವೃತ್ತಿಯನ್ನು ಸುಮಾರು 30 - 35 ಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ.
ಈ ವಿಡಿಯೋ ವನ್ನು ಟ್ವೀಟ್ ಮಾಡಿರುವ ಆನಂದ್ ಮಹೀಂದ್ರಾ, ಕೆಲವು ಸಾಮಾನ್ಯ ಘಟನೆಗಳು ನಮ್ಮಲ್ಲಿ ಅಚ್ಚರಿ ಹುಟ್ಟಿಸುತ್ತವೆ. ಇವರ ಉತ್ಸಾಹ ಕೆಲವು ಜನರಿಗೆ ಪ್ರೇರಣೆಯಾಗುತ್ತದೆ. ಈಗಲೂ ಕಮಲಾದಲ್ ಸೌದೆ ಒಲೆಯ ಮೇಲೆ ಇಡ್ಲಿ ಮಾಡುತ್ತಿರುವುದನ್ನು ಗಮನಿಸಿದ್ದೇನೆ. ಅವರ ಪರಿಚಯ ಯಾರಿಗಾದರು ಇದ್ದಲ್ಲಿ ತಿಳಿಸಿ. ಅವರ ವ್ಯಾಪಾರದಲ್ಲಿ ನಾನು ಹೂಡಿಕೆ ಮಾಡಲು ಸಿದ್ಧನಿದ್ದೇನೆ. ಅವರಿಗೆ ಎಲ್ಪಿಜಿ ಸಿಲಿಂಡರ್ ಖರೀದಿಸಿ ನೀಡಲು ನಾನು ಸಿದ್ದನಿದ್ದೇನೆ’’ ಅಂತ ಬರೆದುಕೊಂಡಿದ್ದಾರೆ, ಸದ್ಯ ಆನಂದ್ ಮಹೀಂದ್ರಾ ಮಾಡಿರುವ ಟ್ವೀಟ್ಗೆ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ. ಇಂಡಿಯನ್ ಆಯಿಲ್ ಕಾರ್ಪೋರೇಷನ್ ಕೂಡ ಪ್ರತಿಕ್ರಿಯೆ ನೀಡಿದೆ, ನಾವು ಕೂಡ ಅಜ್ಜಿಗೆ ಎಲ್ಪಿಜಿ ಸಿಲಿಂಡರ್, ಗ್ಯಾಸ್ ಸ್ಟೋವ್ ಹಾಗೂ ರೆಗ್ಯೂಲೇಟರ್ ಸಹಾಯ ಮಾಡಲು ತಯಾರಿದ್ದೇವೆ ಅಂತ ಹೇಳಿದೆ.
ಕಮಲಾದಲ್ ಅವರ ಅಂಗಡಿಗೆ ಸಾಕಷ್ಟು ಪ್ರಮಾಣದಲ್ಲಿ ಕೂಲಿಯಾಳುಗಳು ಬರುತ್ತಾರೆ. "ನನಗೆ ಇಡ್ಲಿ ವ್ಯಾಪಾರದಿಂದ ಹಣ ಮಾಡಬೇಕು ಎನ್ನುವ ಉದ್ದೇಶವಿಲ್ಲ. ಜನರಿಗೆ ಕಡಿಮೆ ದರದಲ್ಲಿ ತಿಂಡಿ ನೀಡುತ್ತಿರುವುದರಿಂದ ಅವರು ಸಂತೃಪ್ತರಾಗಿ ಹೋಗುತ್ತಿರುವ ಬಗ್ಗೆ ಖುಷಿಯಿದೆ" ಎನ್ನುತ್ತಾರೆ ಕಮಲಾದಲ್. ಈ ಹಿಂದೆ ಅವರು 50 ಪೈಸೆಗೊಂದರಂತೆ ಇಡ್ಲಿಯನ್ನು ನೀಡುತ್ತಿದ್ದರು ಆದರೆ ಆಹಾರ ಪದಾರ್ಥಗಳಲ್ಲಿ ಬೆಲೆ ಏರಿಕೆಯಾದ ನಂತರ 1 ರೂಪಾಯಿಗೆ ಒಂದು ಇಡ್ಲಿಯನ್ನು ಮಾರುತ್ತಿದ್ದಾರೆ. ದಿನಕ್ಕೆ ಕನಿಷ್ಠ ಎಂದರೂ 1 ಸಾವಿರ ಇಡ್ಲಿಯನ್ನು ಈ ಅಜ್ಜಿ ಮಾರುತ್ತಾರಂತೆ.