ನವದೆಹಲಿ, ಆ. 16 (DaijiworldNews/AA): ಯುಜಿಸಿ ಎನ್ಇಟಿ ಪ್ರಶ್ನೆಪತ್ರಿಕೆಯಲ್ಲಿ ಹಲವು ಲೋಪದೋಷಗಳು ಕಂಡುಬಂದ ಹಿನ್ನೆಲೆ 3 ಪತ್ರಿಕೆಗಳಿಗೆ ಮರು ಪರೀಕ್ಷೆ ನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್ಟಿಎ) ಘೋಷಣೆ ಮಾಡಿದೆ.

ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆಗಳನ್ನು ಮರುನಡೆಸುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ತಿಳಿಸಿದೆ. ಜೂನ್ 22ರಿಂದ 30ರವರೆಗೆ ಹಾಗೂ ಜುಲೈ 5ರಂದು ಒಟ್ಟು 87 ವಿಷಯಗಳಲ್ಲಿ ಪರೀಕ್ಷೆಯನ್ನು ಎನ್ಟಿಎ ನಡೆಸಿತ್ತು.
ಜೂನಿಯರ್ ರಿಸರ್ಚ್ ಫೆಲೋಶಿಪ್, ಸಹಾಯಕ ಪ್ರಾಧ್ಯಾಪಕ ಹುದ್ದೆಗೆ ಅರ್ಹತೆ ಮತ್ತು ಪಿಎಚ್ಡಿ ಪ್ರವೇಶಕ್ಕಾಗಿ ಈ ಪರೀಕ್ಷೆ ಆಯೋಜಿಸಲಾಗಿತ್ತು. ಆದರೆ ಇಂಗ್ಲಿಷ್, ವಾಣಿಜ್ಯ ಮತ್ತು ಸಮಾಜಶಾಸ್ತ್ರ ವಿಷಯಗಳ ಪ್ರಶ್ನೆಪತ್ರಿಕೆಗಳಲ್ಲಿ ಹಲವು ದೋಷಗಳಿವೆ ಎಂದು ಅಭ್ಯರ್ಥಿಗಳಿಂದ ಎನ್ಟಿಎಗೆ ಹಲವು ದೂರುಗಳು ಬಂದಿದ್ದವು.
ದೂರುಗಳನ್ನು ಗಂಭೀರವಾಗಿ ಪರಿಗಣಿಸಿದ ಎನ್ಟಿಎ, ಪ್ರಶ್ನೆಪತ್ರಿಕೆಗಳಲ್ಲಿನ ದೋಷಗಳ ಕುರಿತು ಪರಿಶೀಲನೆ ನಡೆಸಲು ಸಮಿತಿಯೊಂದನ್ನು ರಚಿಸಿತ್ತು. ಸಮಿತಿಯು ದೂರುಗಳು ಮತ್ತು ಪರೀಕ್ಷೆಗೆ ಸಂಬಂಧಿಸಿದ ಅಂಶಗಳನ್ನು ಪರಿಶೀಲಿಸಿದ ಬಳಿಕ, ಈ ಮೂರು ವಿಷಯಗಳ ಪರೀಕ್ಷೆಯನ್ನು ಮರುನಡೆಸುವ ನಿರ್ಧಾರ ಕೈಗೊಂಡಿದೆ. ಸೆಪ್ಟೆಂಬರ್ 9ರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಇಂಗ್ಲಿಷ್, ಸೆಪ್ಟೆಂಬರ್ 9ರ ಮಧ್ಯಾಹ್ನ 3 ರಿಂದ ಸಂಜೆ 6 ರವರೆಗೆ ವಾಣಿಜ್ಯ, ಸೆಪ್ಟೆಂಬರ್ 10 ರ ಬೆಳಗ್ಗೆ 9 ರಿಂದ ಮಧ್ಯಾಹ್ನ 12 ರವರೆಗೆ ಸಮಾಜಶಾಸ್ತ್ರ ವಿಷಯಗಳ ಪರೀಕ್ಷೆ ನಡೆಸಲಾಗುವುದು.