ಚಿತ್ರದುರ್ಗ,ಸೆ 12 (Daijiworld News/RD): ಸಂಚಾರ ನಿಯಮ ಉಲ್ಲಂಘನೆಯ ದಂಡದ ಪ್ರಮಾಣವನ್ನು ಏರಿಕೆ ಮಾಡಿದ್ದಕ್ಕೆ ವೈಯಕ್ತಿಕವಾಗಿ ನನ್ನ ಬೆಂಬಲವಿಲ್ಲ, ಆದರೆ ರಸ್ತೆಗಳು ಚೆನ್ನಾಗಿದ್ದರೆ ಅಪಘಾತ ಜಾಸ್ತಿಯಾಗಿ ಸಂಭವಿಸುತ್ತದೆ ಎಂದು ರಾಜ್ಯದ ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ ಹೇಳಿದ್ದಾರೆ.
ಹೊಳಲ್ಕೆರೆ ತಾಲ್ಲೂಕಿನ ಚಿತ್ರಹಳ್ಳಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ’ರಸ್ತೆ ದುರಸ್ತಿ ಸೇರಿ ಮೂಲ ಸೌಲಭ್ಯ ಕಲ್ಪಿಸಿದ ಬಳಿಕ ದಂಡ ವಿಧಿಸಬೇಕು ಎಂಬ ವಾದವನ್ನು ನಾನು ಒಪ್ಪುವುದಿಲ್ಲ. ರಸ್ತೆ ಸುರಕ್ಷಿತವಾಗಿ ಇರುವುದರಿಂದಲೇ ಅಪಘಾತಗಳು ಹೆಚ್ಚಾಗುತ್ತಿವೆ. ಹೆದ್ದಾರಿಗಳಲ್ಲಿ ಹೆಚ್ಚು ವೇಗವಾಗಿ ವಾಹನಗಳು ಸಂಚರಿಸುತ್ತಿವೆ. 160 ಕಿ.ಮೀ. ವೇಗವಾಗಿ ಸಾಗುವುದರಿಂದ ಅಪಘಾತ ಸಂಭವಿಸುತ್ತಿವೆ’ ಎಂದರು.
ಗುಜರಾತ್ ಸೇರಿ ಹಲವು ರಾಜ್ಯಗಳಲ್ಲಿ ಈಗಾಗಲೇ ಸಂಚಾರಿ ದಂಡದ ಮೊತ್ತ ಪರಿಷ್ಕರಣೆ ಮಾಡಿದ್ದಾರೆ. ಇನ್ನು ರಾಜ್ಯದಲ್ಲಿ ಈ ಬಗ್ಗೆ ಸಚಿವ ಸಂಪುಟದಲ್ಲಿ ಚರ್ಚಿಸಿ ಸರ್ಕಾರ ತೀರ್ಮಾನ ಕೈಗೊಳ್ಳಲಿದೆ ಎಂದು ಅವರು ಹೇಳಿದರು. ಅಂತೆಯೇ ಸಂಚಾರ ನಿಯಮ ಉಲ್ಲಂಘನೆಯ ದಂಡದ ಪ್ರಮಾಣವನ್ನು ಏರಿಕೆ ಮಾಡಿದ್ದಕ್ಕೆ ವೈಯಕ್ತಿಕವಾಗಿ ನನ್ನ ಬೆಂಬಲವಿಲ್ಲ ಎಂದು ಹೇಳಿದ ಗೋವಿಂದ ಕಾರಜೋಳ ಅವರು, ಕಾಂಗ್ರೆಸ್ ಶಾಸಕ ಡಿ.ಕೆ.ಶಿವಕುಮಾರ್ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡುವುದಿಲ್ಲ. ಜಾರಿ ನಿರ್ದೇಶನಾಲಯ ಹಾಗೂ ಸಿಬಿಐ ತಮ್ಮ ಕೆಲಸ ಮಾಡುತ್ತಿವೆ ಎಂದು ಹೇಳಿದರು.