ಮುಂಬೈ, ಸೆ 12 (Daijiworld News/RD): ಡಿಜಿಟಲ್ ಇಂಡಿಯಾಕ್ಕೆ ಸಾಥ್ ಕೊಡುವ ನಿಟ್ಟಿನಲ್ಲಿ, ಎಲ್ಲಾ ಕ್ಷೇತ್ರದಲ್ಲಿ ಆನ್ಲೈನ್ ಸೇವೆಗಳು ಆರಂಭಗೊಂಡಿದ್ದು, ಹಣ ವರ್ಗಾವಣೆಯನ್ನು ಕೆಲವೇ ನಿಮಿಷದಲ್ಲಿ ಮಾಡುವ ಮೂಲಕ ಸುಲಭ ದಾರಿಯನ್ನು ಕಂಡುಕೊಳ್ಳಲಾಗಿದೆ. ಇದೀಗ ಕಳ್ಳರು ಇದನ್ನೆ ತಮ್ಮ ದಾಳವನ್ನಾಗಿ ಉಪಯೋಗಿಸಿ ಜನರ ಖಾತೆಯಿಂದ ಲಕ್ಷಾಂತರ ಹಣ ದೋಚುತ್ತಿದ್ದಾರೆ.
೩೧ ವರ್ಷದ ವ್ಯಕ್ತಿಯೊಬ್ಬರು ಗೂಗಲ್ ಪೇ ಮೂಲಕ 96 ಸಾವಿರ ರೂ. ವಿದ್ಯುತ್ ಬಿಲ್ ಪಾವತಿಸಲು ಮುಂದಾಗಿದ್ದರು. ಹಣವನ್ನು ವರ್ಗಾವಣೆ ಮಾಡುವ ಸಂದರ್ಭದಲ್ಲಿ ಸಮಸ್ಯೆ ಕಾಣಿಸಿದ್ದು,ಸಾಕಷ್ಟು ಬಾರಿ ಪ್ರಯತ್ನಿಸಿದರು ಸಮಸ್ಯೆ ಪರಿಹಾರವಾಗದ ಹಿನ್ನೆಲೆಯಲ್ಲಿ ಅವರು ಇಂಟರ್ ನೆಟ್ ನಲ್ಲಿ ಗೂಗಲ್ ಪೇ ಕಸ್ಟಮರ್ ಕೇರ್ ನಂಬರ್ ಸರ್ಚ್ ಮಾಡಿ, ಕರೆ ಮಾಡಿದಾಗ ಆ ವ್ಯಕ್ತಿ “ನಾನು ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ” ಎಂದು ಪೋಸ್ ನೀಡಿ, “ಹಣವನ್ನು ವರ್ಗಾವಣೆ ಮಾಡುವ ಈ ರೀತಿಯ ಸಮಸ್ಯೆಯಾಗುವುದು ಸಾಮಾನ್ಯ. ಈ ಹಿಂದೆ ಹಲವು ಮಂದಿಗೆ ಈ ರೀತಿಯ ಸಮಸ್ಯೆಯಾದಾಗ ನಾನೇ ಕೆಲ ನಿಮಿಷದಲ್ಲಿ ಸರಿ ಮಾಡಿಕೊಟ್ಟಿದ್ದೇನೆ. ನಿಮ್ಮ ಸಮಸ್ಯೆಯನ್ನು ಪರಿಹರಿಸುತ್ತೇನೆ” ಎಂದು ಹೇಳಿದ್ದ. ಇದಾದ ಬಳಿಕ ವಂಚಕ,”ನಾನೊಂದು ಲಿಂಕ್ ಕಳುಹಿಸುತ್ತೇನೆ. ಆ ಲಿಂಕ್ ಕ್ಲಿಕ್ ಮಾಡಿ” ಎಂದು ಸೂಚಿಸಿದ್ದಾನೆ. ಈತನ ಮಾತಿನ ಮೇಲೆ ನಂಬಿಕೆ ಇಟ್ಟು ವ್ಯಕ್ತಿ ಲಿಂಕ್ ಕ್ಲಿಕ್ ಮಾಡಿದಾಗ ಅವರ ಖಾತೆಯಿಂದ 96 ಸಾವಿರ ರೂ. ಹಣ ವಂಚಕನ ಖಾತೆಗೆ ಹೋಗಿದೆ ಎಂದು ತಿಳಿದುಬಂದಿದೆ.
ಗೂಗಲ್ ಪೇ ಕಸ್ಟಮರ್ ಕೇರ್ ಅಧಿಕಾರಿ ಎಂದು ಎಂದು ಹೇಳಿ 96 ಸಾವಿರ ರೂ. ಹಣವನ್ನು ವಂಚಿಸಿದ್ದಾನೆ, ಎಂದು ವ್ಯಕ್ತಿ ದೂರು ನೀಡಿದ್ದು, ಅಂಧೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.