ನವದೆಹಲಿ, ಸೆ.12(Daijiworld News/SS): ಆರ್ಥಿಕತೆಯನ್ನು ಸರಿಪಡಿಸುವ ವಾಸ್ತವ ಯೋಜನೆಯ ಅಗತ್ಯವಿದೆ ಎಂದು ಮೋದಿ ಸರ್ಕಾರದ ವಿರುದ್ಧ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.
ಆಟೋಮೊಬೈಲ್ ವಲಯದಲ್ಲಿ ವಾಹನ ಮಾರಾಟ ಕುಸಿಯಲು ಓಲಾ, ಉಬರ್ ಹಾಗೂ ಮೆಟ್ರೋ ಪ್ರಯಾಣ ಕಾರಣ. ಎರಡು ವರ್ಷಗಳ ಹಿಂದೆ ಆಟೋಮೊಬೈಲ್ ಕ್ಷೇತ್ರಕ್ಕೆ ಉತ್ತಮ ಅವಕಾಶ ಇತ್ತು. ಆದರೆ ಈಗ ದೇಶದ ಲಕ್ಷಾಂತರ ಜನರು ತಮ್ಮ ಇಎಂಐ ಉಳಿಸಲು ಓಲಾ ಮತ್ತು ಉಬರ್ ಕಾರುಗಳಲ್ಲಿ ಓಡಾಡುತ್ತಾರೆ. ಇದೇ ಕಾರಣಕ್ಕೆ ಆಟೋಮೊಬೈಲ್ ಕ್ಷೇತ್ರ ಹಿನ್ನಡೆ ಕಂಡಿದೆ ಎಂದು ಚೆನ್ನೈಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿಕೆ ನೀಡಿದ್ದರು.
ಈ ಹೇಳಿಕೆಗೆ ಪ್ರತಿಕ್ರಿಯಿಸಿರುವ ರಾಹುಲ್ ಗಾಂಧಿ, ದೇಶದಲ್ಲಿ ಆರ್ಥಿಕತೆ ಕುಸಿತ ಕಂಡುಬಂದಿರುವ ಈ ಸಂದರ್ಭದಲ್ಲಿ ಪ್ರಚಾರ, ಇನ್ನೊಬ್ಬರನ್ನು ಪ್ರಚೋದಿಸುವಂತಹ ಸುದ್ದಿಗಳು, ಮೂರ್ಖ ಸಿದ್ಧಾಂತಗಳು ನಮಗೆ ಬೇಕಾಗಿಲ್ಲ. ತಳಮಟ್ಟದ ವಾಸ್ತವ ಯೋಜನೆಗಳನ್ನು ರೂಪಿಸಿ ಆರ್ಥಿಕತೆಯನ್ನು ಸರಿಪಡಿಸಬೇಕು ಎಂದು ಟ್ವೀಟ್ ಮಾಡಿದ್ದಾರೆ.