ಬೆಂಗಳೂರು, ಸೆ.13(Daijiworld News/SS): ರಾಜ್ಯದಲ್ಲಿ ಧಾರಾಕಾರ ಮಳೆ ಹಾಗೂ ಪ್ರವಾಹದಿಂದ ನಲುಗಿರುವ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ವಿಳಂಬವಾಗಿರುವುದನ್ನು ಕಾಂಗ್ರೆಸ್ ಖಂಡಿಸಿದೆ.
ಶಾಸಕರಾದ ಎಂ.ಬಿ.ಪಾಟೀಲ, ಸತೀಶ್ ಜಾರಕಿಹೊಳಿ, ಮಹಾಂತೇಶ ಕೌಜಲಗಿ, ಆನಂದ ನ್ಯಾಮಗೌಡ ಪರಿಹಾರ ಕಾರ್ಯ ಚುರುಕುಗೊಳಿಸುವಂತೆ ಆಗ್ರಹಿಸಿದ್ದಾರೆ. ಮಾತ್ರವಲ್ಲ, ನೆರೆ ಸಂತ್ರಸ್ತರಿಗೆ ನೆರವು ನೀಡುವ ನಿಟ್ಟಿನಲ್ಲಿ ಈವರೆಗೂ ಸಮರ್ಪಕವಾಗಿ ಪರಿಹಾರ ಕಾರ್ಯ ಕೈಗೊಂಡಿಲ್ಲ. ಹೀಗಾಗಿ ಇನ್ನೂ ಹೋರಾಟದ ಮೂಲಕ ಪಡೆದುಕೊಳ್ಳಬೇಕಾಗಿದೆ ಎಂದು ಸಂತ್ರಸ್ತ ಭಾಗದ ಕಾಂಗ್ರೆಸ್ ಶಾಸಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರಾಜ್ಯದ ಹಲವು ಕಡೆ ಅತಿವೃಷ್ಟಿ ಸಂಭವಿಸಿದೆ. ಆದರೆ ಇಷ್ಟು ದಿನ ರಾಜಕಾರಣ ಮಾಡಬಾರದು ಎಂದು ಸುಮ್ಮನಿದ್ದೆವು. ಆದರೂ ಈವರೆಗೂ ಸಮರ್ಪಕವಾಗಿ ಪರಿಹಾರ ವ್ಯವಸ್ಥೆ ಮಾಡಿಲ್ಲ. ಇನ್ನು ಮುಂದೆ ಸುಮ್ಮನೆ ಕುಳಿತುಕೊಳ್ಳದೆ ಹೋರಾಟ ಆರಂಭಿಸಲಾಗುವುದು. ಇದರ ಮೊದಲ ಭಾಗವಾಗಿ ಸಂತ್ರಸ್ತರನ್ನು ಒಂದೆಡೆ ಸೇರಿಸಿ ಪ್ರತಿಭಟನೆ ಸಂಘಟಿಸಲಿದ್ದೇವೆ ಎಂದು ಕಾಂಗ್ರೆಸ್ ಎಚ್ಚರಿಸಿದೆ.
ರಾಜ್ಯದ ನೆರೆ ಸಂತ್ರಸ್ತರಿಗೆ ಕೇಂದ್ರ ಸರ್ಕಾರದಿಂದ ಪರಿಹಾರ ಘೋಷಣೆ ವಿಳಂಬವಾಗಿದೆ. ಸಚಿವರು ಹೇಳಿದ್ದರಲ್ಲಿ ಅರ್ಧದಷ್ಟು ಮಂದಿಗೂ ಪರಿಹಾರ ನೀಡಿಲ್ಲ. ಸುಳ್ಳು ವಿವರಗಳನ್ನು ನೀಡಿ ಜನರನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಹೆಸರಿಗಷ್ಟೇ ಪರಿಹಾರ ಕಾರ್ಯ ನಡೆದಿದೆ. ಜನರಿಗೆ ನೆರವೂ ಸಿಗುತ್ತಿಲ್ಲ ಎಂದು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.