ನವದೆಹಲಿ, ಸೆ 13 (Daijiworld News/RD): ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಳೆದ 10 ದಿನಗಳಿಂದ ನ್ಯಾಯಾಂಗ ಬಂಧನಕ್ಕೊಳಗಾಗಿರುವ ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಅವರನ್ನು ಇಡಿ ಅಧಿಕಾರಿಗಳು ಇಂದು ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದಾರೆ. ಹೀಗಾಗಿ ಇಂದಾದರೂ ಅವರಿಗೆ ಜಾಮೀನು ಸಿಗುತ್ತೋ ಅಥವಾ ನ್ಯಾಯಾಂಗ ಬಂಧನ ಮುಂದುವರೆಯುತ್ತಾ ಎಂಬುವುದು ಇಂದು ನಿರ್ಧರವಾಗಲಿದೆ.
ಇಡಿ ಇಲಾಖೆಯ ಮೂಲಗಳ ಪ್ರಕಾರ ಡಿ.ಕೆ.ಶಿವಕುಮಾರ್ ಅಧಿಕಾರಿಗಳ ವಿಚಾರಣೆಗೆ ಸಹಕರಿಸುತ್ತಿಲ್ಲ ಎನ್ನಲಾಗುತ್ತಿದೆ. ಆರಂಭದಲ್ಲಿ ಸಮನ್ಸ್ ನೀಡಿದ್ದಾಗಲೂ ಇಡಿ ಅಧಿಕಾರಿಗಳ ಪ್ರಶ್ನೆಗಳಿಗೆ ಸರಿಯಾಗಿ ಉತ್ತರಿಸಿರಲಿಲ್ಲ. ಇದೀಗ ನ್ಯಾಯಾಂಗ ವಶಕ್ಕೆ ಪಡೆದ ಮೇಲೂ ಯಾವುದೇ ರೀತಿ ವಿಚಾರಣೆಗೆ ಡಿಕೆಶಿ ಸ್ಪಂದಿಸುತ್ತಿಲ್ಲ. ಹೀಗಾಗಿ ಅವರನ್ನು ಇನ್ನೂ 4 ದಿನ ಇಡಿ ಕಸ್ಟಡಿಗೆ ನೀಡಬೇಕು ಎಂದು ಜಾರಿ ನಿರ್ದೇಶನಾಲಯದ ವಕೀಲರು ನ್ಯಾಯಾಲಯದ ಎದುರು ಮನವಿ ಮಾಡುವ ಸಾಧ್ಯತೆ ಇದೆ.
ಈವರೆಗೆ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಡಿ.ಕೆ. ಶಿವಕುಮಾರ್ ಅವರನ್ನು ಸಮನ್ಸ್ ನೀಡಿ ಒಟ್ಟು 14 ದಿನ ವಿಚಾರಣೆ ನಡೆಸಿದ್ದಾರೆ. ಡಿಕೆಶಿ ಎಲ್ಲಾ ರೀತಿಯಲ್ಲೂ ಅಧಿಕಾರಿಗಳ ವಿಚಾರಣೆಗೆ ಸಹಕರಿಸಿದ್ದಾರೆ. ಆದರೆ, ಇಡಿ ಅಧಿಕಾರಿಗಳು ಪ್ರಕರಣಕ್ಕೆ ಸಂಬಂಧಿಸಿದ ದಾಖಲೆಗಳನ್ನು ಈವರೆಗೆ ಕಲೆಹಾಕಿಲ್ಲ. ಹೀಗಾಗಿ ಜಾಮೀನು ಅರ್ಜಿಯನ್ನು ಸ್ವೀಕರಿಸಿ ಜಾಮೀನು ನೀಡಬೇಕು ಎಂದು ಡಿಕೆಶಿ ಪರ ವಕೀಲರು ಸಹ ನ್ಯಾಯಾಲಯದ ಎದುರು ವಾದ ಮಂಡಿಸಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಈಗಾಗಲೇ ನಿನ್ನೆ ಇಡಿ ಅಧಿಕಾರಿಗಳು ಡಿಕೆಶಿಯವರ ಪುತ್ರಿಯನ್ನು ವಿಚಾರಣೆ ನಡೆಸಿದ್ದು, ಈ ಸುದ್ದಿ ಕೇಳಿ ಮನನೊಂದಿರುವ ಡಿಕೆ ಶಿವಕುಮಾರ್ ಅವರಿಗೆ ರಕ್ತದೊತ್ತಡ ಹಾಗೂ ಡಯೇರಿಯಾದಿಂದ ಅನಾರೋಗ್ಯ ಕಾಣಿಸಿಕೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ತಿಳಿದುಬಂದಿದೆ.