ಮೈಸೂರು, ಸೆ.13(Daijiworld News/SS): ನಮ್ಮ ರಾಜ್ಯದ ಸಮಸ್ಯೆಗಳ ಕಡೆ ಗಮನ ಕೊಡುವ ಕೆಲಸ ಮೋದಿಯಿಂದ ಆಗುತ್ತಿಲ್ಲ. ಮೋದಿ ಅವರಲ್ಲಿ ರಾಜ್ಯದ ನೆರೆ ಸಂತ್ರಸ್ತರಿಗೆ ಕೊಡಲು ಹಣ ಇಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಟೀಕಿಸಿದ್ದಾರೆ.
ನೆರೆ ಪರಿಹಾರಕ್ಕೆ 3 ಸಾವಿರದ 800 ಕೋಟಿ ಪರಿಹಾರವನ್ನು ರಾಜ್ಯ ಕೇಳಿದರೆ ಕೇಂದ್ರದಿಂದ ಯಾವುದೇ ಪರಿಹಾರ ಸಿಕ್ಕಿಲ್ಲ. ಕಂದಾಯ ಸಚಿವರ ಬಳಿ ನೆರೆ ಬಗ್ಗೆ ಮಾಹಿತಿಯೇ ಇಲ್ಲ. ಪ್ರಧಾನಿ ಮೋದಿಯವರಿಗೆ ರಷ್ಯಾಕ್ಕೆ ಹೋಗಿ 7 ಸಾವಿರ ಕೋಟಿ ಹಣ ಸಾಲ ಕೊಡಲು ಆಗತ್ತದೆ. ಆದರೆ, ಮೋದಿ ಅವರಿಗೆ ರಾಜ್ಯದ ಜನರಿಗೆ ಹಣ ಕೊಡಲು ಆಗುತ್ತಿಲ್ಲ. ನಮ್ಮ ರಾಜ್ಯದ ಸಮಸ್ಯೆಗಳ ಕಡೆ ಗಮನ ಕೊಡುವ ಕೆಲಸ ಮೋದಿಯಿಂದ ಆಗುತ್ತಿಲ್ಲ ಎಂದು ಹೇಳಿದರು.
ಇದೇ ವೇಳೆ ಚಂದ್ರಯಾನ-2 ವಿಚಾರದಲ್ಲಿ ಮಾತನಾಡಿದ ಅವರು, ಚಂದ್ರಯಾನ-2 ಬಾಹ್ಯಾಕಾಶ ಯೋಜನೆಗೆ ವಿಜ್ಞಾನಿಗಳು 10ರಿಂದ 12 ವರ್ಷಗಳ ಕಾಲ ಕಷ್ಟಪಟ್ಟು ಕೆಲಸ ಮಾಡಿದ್ದರು. ಚಂದ್ರಯಾನ-2ಗೆ 2008-09ರಲ್ಲಿಯೇ ಅನುಮೋದನೆ ನೀಡಿ ಅದೇ ವರ್ಷ ಹಣ ಬಿಡುಗಡೆ ಮಾಡಲಾಗಿತ್ತು. ಆದರೆ ಅದರ ಶ್ರೇಯಸ್ಸನ್ನೆಲ್ಲ ತಾವೇ ಪಡೆದುಕೊಳ್ಳಲು ಮೋದಿಯವರು ಬೆಂಗಳೂರಿಗೆ ಬಂದರು. ಮೋದಿ ಅವರು ಇಸ್ರೊ ಕೇಂದ್ರಕ್ಕೆ ಕಾಲಿಟ್ಟ ಗಳಿಗೆ ವಿಜ್ಞಾನಿಗಳಿಗೂ ಅಪಶಕುನ ಆಗಿದೆ ಅನ್ಸುತ್ತೆ ಎಂದು ಲೇವಡಿ ಮಾಡಿದರು.