ಶ್ರೀನಗರ, ಸೆ.13(Daijiworld News/SS): ಭಾರತ-ಪಾಕಿಸ್ತಾನದ ಗಡಿಯಲ್ಲಿ ಉಗ್ರರು ದಾಳಿ ಮಾಡುವ ಸಾಧ್ಯತೆ ಇದೆ ಎಂಬ ಆತಂಕದ ಮಾಹಿತಿ ಬಹಿರಂಗಗೊಂಡಿದೆ. ಪಾಕಿಸ್ತಾನ ಆಕ್ರಮಿತ ಕಾಶ್ಮೀರದಿಂದ (ಪಿಒಕೆ) ಭಾರಿ ಶಸ್ತ್ರಾಸ್ತ್ರಗಳೊಂದಿಗೆ 50 ಉಗ್ರರ ತಂಡ ಕಾಶ್ಮೀರದ ಒಳಕ್ಕೆ ನುಸುಳಿದೆ ಎಂಬ ವರದಿಗಳು ಆತಂಕಕ್ಕೆ ಕಾರಣವಾಗಿದ್ದು, ಭದ್ರತೆಯನ್ನು ಇನ್ನಷ್ಟು ಬಿಗಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.
ಉಗ್ರಗಾಮಿ ಸಂಘಟನೆಗಳ ಸದಸ್ಯರು ಗಡಿ ನಿಯಂತ್ರಣ ರೇಖೆ (ಎಲ್ಒಸಿ) ದಾಟಿ ಕಾಶ್ಮೀರ ಪ್ರವೇಶಿಸಿದ್ದಾರೆ. ಕಠಿಣ ತರಬೇತಿ ಪಡೆದಿರುವ, ಆಧುನಿಕ ಶಸ್ತ್ರಾಸ್ತ್ರ ಹೊಂದಿರುವ ಉಗ್ರರನ್ನು ಕಾಶ್ಮೀರದಲ್ಲಿ ಆತ್ಮಾಹುತಿ ದಾಳಿ ಎಸಗಲು ನಿಯೋಜಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಕಳೆದ ಕೆಲವು ವಾರಗಳಿಂದ ಎರಡೂ ಕಡೆಗಳಿಂದ ಗುಂಡಿನ ಚಕಮಕಿ ಹೆಚ್ಚಳವಾಗಿದೆ. ಗುಂಡಿನ ಚಕಮಕಿಯ ಲಾಭ ಪಡೆದು ಉಗ್ರರು ಗಡಿ ದಾಟಿ ಬರುತ್ತಿದ್ದಾರೆ. ಇಂತಹ ಹಲವು ಯತ್ನಗಳನ್ನು ಸೇನೆ ವಿಫಲಗೊಳಿಸಿದ್ದರೂ, ಕೆಲವರು ಒಳನುಗ್ಗಿದ್ದಾರೆ ಎನ್ನಲಾಗಿದೆ.
ಜಮ್ಮು–ಕಾಶ್ಮೀರದ ವಿಶೇಷಾಧಿಕಾರವನ್ನು ಕೇಂದ್ರ ಸರ್ಕಾರ ರದ್ದು ಮಾಡಿದ ವಿಚಾರವನ್ನೇ ಇಟ್ಟುಕೊಂಡು ಯುವಕರನ್ನು ಸೆಳೆಯಲು ಉಗ್ರ ಸಂಘಟನೆಗಳು ಯತ್ನಿಸುತ್ತಿವೆ. ಕೆಲವು ಯುವಕರು ತಮ್ಮ ಮನೆಗಳಿಂದ ನಾಪತ್ತೆಯಾಗಿದ್ದು, ಅವರು ಉಗ್ರ ಸಂಘಟನೆಗಳನ್ನು ಸೇರಿಕೊಂಡಿರಬಹುದು ಎಂಬ ಅನುಮಾನ ಇದೆ ಎಂದು ಮೂಲಗಳು ತಿಳಿಸಿದೆ.
ಆಗಸ್ಟ್ ತಿಂಗಳ ಮಧ್ಯಭಾಗದಲ್ಲಿ ಎಲ್ಒಸಿಯ ವಿವಿಧ ಜಾಗಗಳಲ್ಲಿ ಒಳನುಸುಳುವಿಕೆ ಯತ್ನಗಳು ನಡೆದಿದ್ದವು. ಇದೀಗ ಮತ್ತೆ ಉಗ್ರರ ಒಳನುಸುಳುವಿಕೆ ಯತ್ನಗಳು ನಡೆದಿವೆ ಎಂಬುದನ್ನು ರಾಜ್ಯದ ಪೊಲೀಸ್ ಮುಖ್ಯಸ್ಥ ದಿಲ್ಬಾಗ್ ಖಚಿತ ಪಡಿಸಿದ್ದಾರೆ.