ಬೆಂಗಳೂರು, ಸೆ 13 (Daijiworld News/RD): ದೇವಾಲಯಗಳಲ್ಲಿ ಆದಾಯದ ಸೋರಿಕೆ ತಡೆಯಲು ಮತ್ತು ಪಾರದರ್ಶಕತೆ ತರಲು ‘ಇ-ಹುಂಡಿ’ ಯೋಜನೆಯನ್ನು ಸರ್ಕಾರ ಜಾರಿಗೊಳಿಸಲಾಗುತ್ತಿದೆ. ಹಾಗಾಗಿ ಇನ್ನು ಮುಂದೆ ದೇವಸ್ಥಾನದಲ್ಲಿ ಭಕ್ತರು ಹಾಕುವ ಪ್ರತಿಯೊಂದು ದುಡ್ಡಿಗೂ ಲೆಕ್ಕಚಾರ ಸಿಗಲಿದೆ. ಹೀಗಾಗಿ, ಆರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನದಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ.
’ಇ-ಹುಂಡಿ’ ವ್ಯವಸ್ಥೆಯನ್ನು ರಾಜ್ಯದ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಅಳವಡಿಸಲು ಸರ್ಕಾರ ನಿರ್ಧರಿಸಿದ್ದು, ಆರಂಭದಲ್ಲಿ ಕುಕ್ಕೆ ಸುಬ್ರಹ್ಮಣ್ಯ, ಕೊಲ್ಲೂರು ಮೂಕಾಂಬಿಕೆ ದೇವಸ್ಥಾನ ಸೇರಿದಂತೆ ಆಯ್ದ 10- 15 ದೇವಸ್ಥಾನಗಳಲ್ಲಿ ಪ್ರಾಯೋಗಿಕವಾಗಿ ಈ ಯೋಜನೆ ಜಾರಿಗೆ ಬರಲಿದೆ. ಈ ಯೋಜನೆಯು ತಮಿಳುನಾಡಿನ 25ಕ್ಕೂ ಹೆಚ್ಚು ದೇವಸ್ಥಾನಗಳಲ್ಲಿ ಈಗಾಗಲೇ ಜಾರಿಯಾಗಿದೆ.
‘ಇ- ಆಡಳಿತ’ ಇಲಾಖೆಯ ಹಾಗೂ ಖಾಸಗಿ ಸಂಸ್ಥೆಯೊಂದರ ಸಹಯೋಗದಲ್ಲಿ ಇ ಹುಂಡಿ ವ್ಯವಸ್ಥೆಯನ್ನು ಕಲ್ಪಿಸಲು ನಿರ್ಧರಿಸಿದೆ. ಈ ಮೂಲಕ ಭಕ್ತರು ಹಾಕುವ ಕಾಣಿಕೆ, ನಾಣ್ಯ, ನೋಟುಗಳನ್ನು ಮೌಲ್ಯಮಾಪನ ಮಾಡುವ, ರಸೀದಿ ನೀಡುವ ಹಾಗೂ ಆಯಾ ದಿನವೇ ಬ್ಯಾಂಕ್ ಖಾತೆಗೆ ಜಮೆಯಾಗಲಿದೆ. ನಾಣ್ಯ, ನೋಟು, ನೋಟಿನ ಕಂತೆ ಸ್ವೀಕಾರ ವ್ಯವಸ್ಥೆ ಇದ್ದು, ಹರಕೆಯ ಚಿನ್ನ, ಬೆಳ್ಳಿ ಕಾಣಿಕೆಯನ್ನು ಮೌಲ್ಯಮಾಪನ ಮಾಡುವ ವ್ಯವಸ್ಥೆ ಅಳವಡಿಕೆಯ ಬಗ್ಗೆ ಚರ್ಚೆ ನಡೆದಿದೆ. ಹೀಗಾಗಿ ದೇವಸ್ಥಾನಕ್ಕೆ ಬರುವ ಹರಕೆ ಪೋಲು ಆಗದಂತೆ, ಭಕ್ತರು ನೀಡುವ ಪ್ರತೀ ಕಾಸಿಗೂ ಲೆಕ್ಕ ಪಡೆಯಲು ಸುಧಾರಿತ ತಂತ್ರಜ್ಞಾನ ಅಳವಡಿಸಿಕೊಳ್ಳಲು ಇಲಾಖೆ ಮುಂದಾಗಿದೆ.
ಸುಮಾರು 5.5 ಅಡಿ ಎತ್ತರದ 300 ಕೆ.ಜಿ. ತೂಕದ ಈ ಸಾಧನ ಎಟಿಎಂ ಯಂತ್ರದ ಮಾದರಿಯಲ್ಲಿರುತ್ತದೆ. ನಾಣ್ಯ, ನೋಟುಗಳನ್ನು ಹಾಕುತ್ತಿದ್ದಂತೆ ಲೆಕ್ಕ ಹಾಕಿ ರಸೀದಿ ನೀಡಲಿದೆ. ಉನ್ನತ ಅಧಿಕಾರಿಗಳು ಕುಳಿತಲ್ಲೇ ಆಯಾ ದೇವಾಲಯದ ‘ಇ-ಹುಂಡಿ’ಯಲ್ಲಿನ ಕಾಣಿಕೆ ಮೊತ್ತದ ವಿವರ ಪಡೆಯಬಹುದು. ಇನ್ನು ಸಾಧನವನ್ನು ಹಾನಿಪಡಿಸಲು, ಹಣ ದೋಚಲು ಯತ್ನಿಸಿದರೆ ಎಚ್ಚರಿಕೆ ಗಂಟೆ ಮೊಳಗುತ್ತದೆ. ಜೊತೆಗೆ ಈ ಸಾಧನದಲ್ಲಿ ನಾನಾ ಸೇವಾ ಕಾರ್ಯಗಳಿಗೆ ಶುಲ್ಕ ಪಾವತಿಸಿ ರಸೀದಿ ಪಡೆಯಲು ಅವಕಾಶವಿರುತ್ತದೆ ಎಂದು ಮೂಲಗಳು ಹೇಳಿವೆ.
ಈ ಬಗ್ಗೆ ಮಾಹಿತಿ ನೀಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು, ಪರಿಶೀಲನಾ ಸಭೆಯಲ್ಲಿ ಈ ಬಗ್ಗೆ ಪ್ರಾತ್ಯಕ್ಷಿಕ ನೀಡಲಾಗಿದೆ. ಹುಂಡಿಗೆ ಹಾಕುವ ಪ್ರತಿ ಪೈಸೆಯ ಲೆಕ್ಕ ಸಿಗಲಿದೆ ಎಂದರು. ಜತೆಗೆ ಇ-ಹುಂಡಿಗೆ ಸಂಗ್ರಹವಾಗುವ ಹಣದ ಮೌಲ್ಯ ಅದೇ ದಿನ ಸಂಬಂಧಪಟ್ಟ ರಾಷ್ಟ್ರೀಕೃತ ಬ್ಯಾಂಕ್ನ ನಿರ್ದಿಷ್ಟ ಖಾತೆಗೆ ಜಮೆಯಾಗುತ್ತದೆ ಎಂದು ಹೇಳಿದರು.