ನವದೆಹಲಿ, ಸೆ 13 (Daijiworld News/RD): ದೇಶದ ಆರ್ಥಿಕ ಪರಿಸ್ಥಿತಿಯು ಆತಂಕಕಾರಿಯಾಗಿ ಸಾಗುತ್ತಿರುವ ಹಿನ್ನಲೆಯಲ್ಲಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಆರ್ಥಿಕ ಚೇತರಿಕೆಗೆ ಮತ್ತು ಅರ್ಥವ್ಯವಸ್ಥೆಯ ಸುಧಾರಣೆಗೆ ಕೇಂದ್ರ ಸರ್ಕಾರಕ್ಕೆ ಸಲಹೆಗಳನ್ನು ನೀಡಿದ್ದಾರೆ.
ಕೆಲ ತಿಂಗಳುಗಳ ಹಿಂದೆಯಷ್ಟೆ ಜಿಡಿಪಿ ದರ ಕುಸಿತಕ್ಕೆ ಕೇಂದ್ರ ಸರ್ಕಾರದ ಅಸಮರ್ಪಕ ನೀತಿಯೇ ಕಾರಣ ಎಂದು ಗುಡುಗಿದ ಮನಮೋಹನ್ ಸಿಂಗ್, ಇದೀಗ ದೇಶದ ಆರ್ಥಿಕತೆ ಸುಧಾರಿಸಿಕೊಳ್ಳಲು ಯಾವೆಲ್ಲಾ ಕ್ರಮ ಕೈಗೊಂಡರೆ ಉತ್ತಮ ಎಂಬುವುದಕ್ಕೆ ಸಲಹೆ ನೀಡಿದ್ದಾರೆ. ಜಿಎಸ್ಟಿ ಸರಳಗೊಳಿಸುವುದು, ಕೃಷಿ ವಲಯದ ಸುಧಾರಣೆ, ಬಂಡವಾಳ ಸೃಷ್ಟಿ, ಉದ್ಯೋಗ ಸೃಷ್ಟಿಗೆ ಆದ್ಯತೆ, ರಫ್ತು ಹೆಚ್ಚಳ, ಮೂಲ ಸೌಕರ್ಯ ವೃದ್ಧಿ ಈ ಆರು ಕ್ರಮಗಳನ್ನು ಕೈಗೊಂಡರೆ ದೇಶವು ಆರ್ಥಿಕವಾಗಿ ಅಭಿವೃದ್ಧಿ ಪಥದತ್ತ ಸಾಗಲು ಸಾಧ್ಯ ಎಂದಿದ್ದಾರೆ.
ಜಿಎಸ್ಟಿ ಸರಳಗೊಳಿಸಬೇಕು. ಇದರಿಂದ ತಾತ್ಕಾಲಿಕವಾಗಿ ಆದಾಯ ನಷ್ಟವಾದರೂ ಮುಂದಿನ ದಿನಗಳಲ್ಲಿ ಉತ್ತಮ ಬೆಳವಣಿಗೆಗೆ ಸಾಕರವಾಗಲಿದೆ, ಕೃಷಿ ವಲಯದ ಸುಧಾರಣೆಗೆ ನೂತನ ಕ್ರಮ ಕೈಗೊಳ್ಳಬೇಕು, ಬಂಡವಾಳ ಸಂಗ್ರಹಕ್ಕೆ ಸರಕಾರ ಗಮನ ನೀಡಬೇಕು, ಜವಳಿ, ಆಟೊಮೊಬೈಲ್, ಎಲೆಕ್ಟ್ರಾನಿಕ್ಸ್, ಈ ಎಲ್ಲ ಕ್ಷೇತ್ರ ಚೇತರಿಸಿಕೊಳ್ಳಬೇಕು ಈ ಮುಲಕ ಉದ್ಯೋಗ ಸೃಷ್ಠಿಗೆ ಒತ್ತು ನೀಡಬೇಕು. ಹೊಸ ರಫ್ತು ಮಾರುಕಟ್ಟೆ ಕಂಡುಕೊಳ್ಳುವ ಮೂಲಕ ರಫ್ತು ಹೆಚ್ಚಳಕ್ಕೆ ಒತ್ತು ನೀಡಬೇಕು. ಖಾಸಗಿ ವಲಯದ ಹೂಡಿಕೆಗೆ ಉತ್ತೇಜನ, ಮೂಲ ಸೌಕರ್ಯ ವೃದ್ಧಿಗೆ ಆದ್ಯತೆ ನೀಡಬೇಕು ಎಂದು ಹೇಳಿದ್ದಾರೆ.
ಭಾರತ ಪ್ರಸ್ತುತ ದೀರ್ಘಕಾಲ ಕಾಡಬಲ್ಲ ಆರ್ಥಿಕ ಬಿಕ್ಕಟ್ಟನ್ನು ಎದುರಿಸುತ್ತಿದೆ. ಇದನ್ನು ನಾವು ಯಾರೂ ನಿರಾಕರಿಸುವಂತಿಲ್ಲ. ಹಾಗಾಗಿ ಸರಕಾರ ಮುಕ್ತ ಮನಸ್ಸಿನಿಂದ ತಜ್ಞರ ಅಭಿಪ್ರಾಯಗಳನ್ನು ಆಲಿಸಬೇಕು. ಆರ್ಥಿಕ ಸಮಸ್ಯೆ ಆವರ್ತಿತ ಹಾಗೂ ತೀವ್ರ ಸ್ವರೂಪದ ಮಟ್ಟದಲ್ಲಿದ್ದು, ಸರಕಾರ ಸೂಕ್ತ ಕ್ರಮ ಕೈಗೊಂಡರೆ ಮಾತ್ರ ಮುಂದಿನ 3-4 ವರ್ಷಗಳಲ್ಲಿ ಪರಿಸ್ಥಿತಿ ಸುಧಾರಿಸಬಹುದು’ಎಂದು ವಿವರಿಸಿದ್ದಾರೆ. ಕೇಂದ್ರ ಸರಕಾರ ಪರಿಹಾರ ಪ್ಯಾಕೇಜ್ ಘೋಷಣೆ, ರಾಜಕೀಯ ಬಂಡವಾಳ, ನೋಟು ರದ್ದತಿ ಈ ಎಲ್ಲಾ ಕ್ರಮಗಳನ್ನು ಕೈಗೊಳ್ಳಬಾರದು ಎಂದು ಸಿಂಗ್ ಹೇಳಿದ್ದಾರೆ.