ಶ್ರೀನಗರ, ಸೆ. 05 (DaijiworldNews/AA): ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿಯಲ್ಲಿ ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ ಕಮಾಂಡರ್ ಯಾಸಿರ್ ಬಲಿಯಾದ ಘಟನೆ ಜಮ್ಮು ಮತ್ತು ಕಾಶ್ಮೀರದ ಬುದ್ಗಾಮ್ ಜಿಲ್ಲೆಯ ಯೂಸ್ಮಾರ್ಗ್ನ ಮೇಲ್ಭಾಗದಲ್ಲಿ ಶನಿವಾರ ನಡೆದಿದೆ.

ಉಗ್ರರ ಉಪಸ್ಥಿತಿ ಕುರಿತು ಗುಪ್ತಚರ ಮಾಹಿತಿ ಲಭ್ಯವಾದ ಹಿನ್ನೆಲೆಯಲ್ಲಿ ಜಂಟಿ ಭದ್ರತಾ ಪಡೆಗಳು ಯೂಸ್ಮಾರ್ಗ್ನ ಎತ್ತರದ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆ ಆರಂಭಿಸಿದ್ದವು. ಈ ಕಾರ್ಯಾಚರಣೆಯ ವೇಳೆ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ಗುಂಡಿನ ಚಕಮಕಿ ನಡೆದಿದೆ. ಈ ಗುಂಡಿನ ಚಕಮಕಿಯಲ್ಲಿ ಉಗ್ರ ಯಾಸಿರ್ ನನ್ನು ಎನ್ಕೌಂಟರ್ ಮಾಡಲಾಗಿದೆ ಎಂದು ಭದ್ರತಾ ಮೂಲಗಳು ತಿಳಿಸಿವೆ.
ಎನ್ಕೌಂಟರ್ ಮಾಡಲಾದ ಯಾಸಿರ್ ಲಷ್ಕರ್-ಎ-ತೊಯ್ಬಾದ ಸುಲೈಮಾನ್ ಮೂಸಾ ಗುಂಪಿನ ಭಾಗವಾಗಿದ್ದ. ಆದರೆ ಸುಮಾರು ಒಂದು ವರ್ಷದ ಹಿಂದೆ ಆತ ಆ ಗುಂಪಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದ. ಯಾಸಿರ್ನ ಚಲನವಲನಗಳ ಮೇಲೆ ಭದ್ರತಾ ಏಜೆನ್ಸಿಗಳು ನಿಗಾ ಇಟ್ಟಿದ್ದವು ಎನ್ನಲಾಗಿದೆ. ಗುಂಪಿನಿಂದ ಬೇರ್ಪಟ್ಟ ಬಳಿಕ ಯಾಸಿರ್ ಈ ಪ್ರದೇಶದಲ್ಲಿ ಪ್ರಮುಖ ಲಷ್ಕರ್ ಉಗ್ರನಾಗಿ ಹೊರಹೊಮ್ಮಿದ್ದ ಎಂದು ಎನ್ನಲಾಗಿದೆ.
ಯೂಸ್ಮಾರ್ಗ್ನ ಮೇಲ್ಭಾಗದ ಪ್ರದೇಶದಲ್ಲಿ ಯಾಸಿರ್ ಉಪಸ್ಥಿತಿ ಪತ್ತೆಯಾದ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಈ ಕಾರ್ಯಾಚರಣೆ ನಡೆಸಿದೆ. ಈತನ ಎನ್ಕೌಂಟರ್ ಬಳಿಕ ಪ್ರದೇಶದಲ್ಲಿ ಮತ್ತಷ್ಟು ಉಗ್ರರು ಅಡಗಿರುವ ಸಾಧ್ಯತೆಯಿದ್ದು, ಭದ್ರತಾ ಪಡೆಗಳು ಶೋಧ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ.