ರಾಯ್ಪುರ, ಸೆ. 05 (DaijiworldNews/AA): 2013 ರಲ್ಲಿ ಬಸ್ತಾರ್ನಲ್ಲಿ ಕಾಂಗ್ರೆಸ್ ನಾಯಕರ ಮೇಲಿನ ದಾಳಿಗೆ 29 ಮಂದಿ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ 10 ಮಂದಿ ದೋಷಿಗಳು ಎಂದು ಛತ್ತೀಸ್ಗಢದ ಬಸ್ತಾರ್ ಪ್ರದೇಶದ ವಿಶೇಷ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್ಐಎ) ನ್ಯಾಯಾಲಯವು ತೀರ್ಪು ನೀಡಿದೆ.

29 ಜನರನ್ನು ಬಲಿತೆಗೆದುಕೊಂಡ ಮತ್ತು ರಾಜ್ಯದ ಕಾಂಗ್ರೆಸ್ ನಾಯಕತ್ವವನ್ನೇ ನಾಶಮಾಡಿದ್ದ 2013 ರ ಝೀರಾಮ್ ಕಣಿವೆಯ ಮಾವೋವಾದಿ ದಾಳಿಗೆ ಸಂಬಂಧಿಸಿದಂತೆ ಜಗದಲ್ಪುರದ ರಾಷ್ಟ್ರೀಯ ತನಿಖಾ ಸಂಸ್ಥೆ ನ್ಯಾಯಾಲಯದ ನ್ಯಾಯಾಧೀಶ ಅಭಯ್ ಸಿಂಗ್ ರಜಪೂತ್ 10 ಜನರನ್ನು ದೋಷಿಗಳು ಎಂದು ತೀರ್ಪು ನೀಡಿದ್ದಾರೆ. ಇಬ್ಬರು ಮಹಿಳೆಯರು ಸೇರಿದಂತೆ 10 ಆರೋಪಿಗಳನ್ನು ದೋಷಿಗಳು ಎಂದು ತೀರ್ಪು ನೀಡಲಾಗಿದ್ದು, ಶಿಕ್ಷೆಯ ಪ್ರಮಾಣವನ್ನು ಸೆ.16 ರಂದು ಪ್ರಕಟಿಸುವ ಸಾಧ್ಯತೆ ಇದೆ.
2013ರ ಮೇ 25 ರಂದು ಬಸ್ತಾರ್ ಜಿಲ್ಲೆಯ ದರ್ಭಾ ಪೊಲೀಸ್ ಠಾಣೆ ವ್ಯಾಪ್ತಿಯ ಝೀರಾಮ್ ಕಣಿವೆಯ ರಾಷ್ಟ್ರೀಯ ಹೆದ್ದಾರಿಯಲ್ಲಿ ಮಾವೋವಾದಿಗಳು ಕಾಂಗ್ರೆಸ್ ನಾಯಕರ ಬೆಂಗಾವಲು ಪಡೆಯ ಮೇಲೆ ಹೊಂಚುದಾಳಿ ನಡೆಸಿದ್ದರು. ಈ ದಾಳಿಯಲ್ಲಿ ಆಗಿನ ರಾಜ್ಯ ಕಾಂಗ್ರೆಸ್ ಮುಖ್ಯಸ್ಥ ನಂದಕುಮಾರ್ ಪಟೇಲ್, ಅವರ ಪುತ್ರ ದಿನೇಶ್, ವಿಧಾನಸಭೆಯ ಮಾಜಿ ವಿರೋಧ ಪಕ್ಷದ ನಾಯಕ ಮಹೇಂದ್ರ ಕರ್ಮ, ಮಾಜಿ ಕೇಂದ್ರ ಸಚಿವ ವಿದ್ಯಾ ಚರಣ್ ಶುಕ್ಲಾ ಮತ್ತು ಮಾಜಿ ಶಾಸಕ ಉದಯ್ ಮುದ್ಲಿಯಾರ್ ಮುಂತಾದ ಹಿರಿಯ ಕಾಂಗ್ರೆಸ್ ನಾಯಕರು ಸಾವನ್ನಪ್ಪಿದ್ದರು. ಜೊತೆಗೆ ಹಲವಾರು ನಾಗರಿಕರು ಮತ್ತು ಭದ್ರತಾ ಸಿಬ್ಬಂದಿಯೂ ಸಾವನ್ನಪ್ಪಿದ್ದರು.