ಕೋಲ್ಕತ್ತಾ, ಸೆ. 05 (DaijiworldNews/AK): ರಾಜ್ಯದಲ್ಲಿ ಡೆಂಗ್ಯೂ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆ ಪಶ್ಚಿಮ ಬಂಗಾಳ ಆರೋಗ್ಯ ಸಚಿವ ಡಾ. ಶಾರದ್ವತ್ ಮುಖರ್ಜಿ ಅವರು ಶಾಲಾ ವಿದ್ಯಾರ್ಥಿಗಳ ಸಮವಸ್ತ್ರದಲ್ಲಿ ತಾತ್ಕಾಲಿಕ ಬದಲಾವಣೆ ಮಾಡುವಂತೆ ಶಾಲೆಗಳಿಗೆ ಸಲಹೆ ನೀಡಿದ್ದಾರೆ.

ಡೆಂಗ್ಯೂ ಹರಡುವಿಕೆ ಹೆಚ್ಚಾಗುವ ಸೆಪ್ಟೆಂಬರ್, ಅಕ್ಟೋಬರ್ ಮತ್ತು ನವೆಂಬರ್ 3 ತಿಂಗಳ ಅವಧಿಯಲ್ಲಿ, ವಿದ್ಯಾರ್ಥಿಗಳು ದೇಹದ ಕೈ-ಕಾಲುಗಳನ್ನು ಸಾಧ್ಯವಾದಷ್ಟು ಮುಚ್ಚುವಂತಹ ಉಡುಪು ಧರಿಸುವಂತೆ ಶಾಲೆಗಳು ಕ್ರಮ ಕೈಗೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ. ಸಚಿವರ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ವಿರೋಧ ವ್ಯಕ್ತವಾಗಿದೆ.
ಸ್ವಾಸ್ಥ್ಯ ಭವನದಲ್ಲಿ ನಡೆದ ಆರೋಗ್ಯ ಇಲಾಖೆಯ ಉನ್ನತ ಮಟ್ಟದ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಸಚಿವರು, ಹೆಣ್ಣುಮಕ್ಕಳು ಸ್ಕರ್ಟ್ ಧರಿಸಿ ಶಾಲೆಗೆ ಬರುವುದನ್ನು ತಾತ್ಕಾಲಿಕವಾಗಿ ತಪ್ಪಿಸಿ, ಕಾಲುಗಳನ್ನ ಸಂಪೂರ್ಣವಾಗಿ ಮುಚ್ಚಿಕೊಳ್ಳುವ ಸಲ್ವಾರ್ ಸೂಟ್ ಹಾಕೊಂಡು ಬರುವಂತೆ ಸೂಚನೆ ಕೊಡಿ. ಮುಂದಿನ 3 ತಿಂಗಳು ಶಾಲೆಯ ಸಮವಸ್ತ್ರ ಏನೇ ಇರಲಿ, ವಿದ್ಯಾರ್ಥಿಗಳಿಗೆ ಪೂರ್ಣ ತೋಳಿನ ಬಟ್ಟೆ ಧರಿಸಲು ಅವಕಾಶ ಕೊಡಿ. ಶಿಕ್ಷಕರು, ಮುಖ್ಯ ಶಿಕ್ಷಕರು ಮತ್ತು ಮುಖ್ಯೋಪಾಧ್ಯಾಯಿನಿಯರು ಇದಕ್ಕೆ ಸಹಕರಿಸಬೇಕು ಎಂದು ಸಚಿವರು ಮನವಿ ಮಾಡಿದ್ದಾರೆ.