ಬೆಂಗಳೂರು, ಸೆ 13 (Daijiworld News/RD): ಉತ್ತರ ಭಾರತದ ಹಲವು ಬ್ಯಾಂಕ್ ಗಳು ನಷ್ಟದಲ್ಲಿದ್ದು, ಅವುಗಳನ್ನು ಬಿಟ್ಟು ಉತ್ತಮ ಲಾಭದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಸಿಂಡಿಕೇಟ್ ಬ್ಯಾಂಕನ್ನು ವಿಲೀನ ಮಾಡಲು ಕೇಂದ್ರ ಸರ್ಕಾರ ಮುಂದಾಗಿದೆ. ರಾಜಕೀಯ ಕುತಂತ್ರಕ್ಕೆ ಸಿಂಡಿಕೇಟ್ ಬ್ಯಾಂಕ್ ಬಲಿಯಾಗಿದೆ ಎಂದು ಸಿಂಡಿಕೇಟ್ ಬ್ಯಾಂಕ್ ನೌಕರರ ಸಂಘದ ಸಾಯಿರಾಂ ವಿರೋಧ ವ್ಯಕ್ತಪಡಿಸಿದರು.
ವಿಲೀನ ಪ್ರಕ್ರಿಯೆ ಕುರಿತು ಬ್ಯಾಂಕ್ ಮಂಡಳಿ ಇಂದು ಸಭೆ ನಡೆಸುತ್ತಿದ್ದು, ಸಿಂಡಿಕೇಟ್ ಬ್ಯಾಂಕ್ ವಿಲೀನ ವಿರೋಧಿಸಿ ಗಾಂಧಿನಗರದ ಸಿಂಡಿಕೇಟ್ ಬ್ಯಾಂಕ್ ಕೇಂದ್ರ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿ ಮಾತನಾಡಿದರು. ಈ ಸಂದರ್ಭದಲ್ಲಿ 500ಕ್ಕೂ ಹೆಚ್ಚು ಸಿಂಡಿಕೇಟ್ ಬ್ಯಾಂಕ್ ನೌಕರರು ಭಾಗವಹಿಸಿ ವಿಲೀನ ಪ್ರಕ್ರಿಯೆ ಸರಿಯಲ್ಲ, ಕೇಂದ್ರ ಸರ್ಕಾರ ಈ ನಿಲುವನ್ನು ಹಿಂಪಡೆಯಬೇಕು. ಶತಮಾನದ ಹೊಸ್ತಿಲಲ್ಲಿರುವ ಸಿಂಡಿಕೇಟ್ ಬ್ಯಾಂಕ್ ಅನ್ನು ಉಳಿಸಿಕೊಡಬೇಕು ಎಂದು ಘೋಷಣೆ ಕೂಗಿದರು.
ಇಂದು ಬ್ಯಾಂಕ್ ಬೋರ್ಡ್ ಸಭೆ ನಡೆಯುತ್ತಿದ್ದು, ವಿಲೀನ ಪ್ರಕ್ರಿಯೆಗೆ ಒಪ್ಪಿಗೆ ಸೂಚಿಸಲು ಮುಂದಾಗಿದ್ದಾರೆ. ವಿಲೀನವಾದರೆ ಕರ್ನಾಟಕ ಮೂಲದ ನಾಲ್ಕು ರಾಷ್ಟ್ರೀಕೃತ ಬ್ಯಾಂಕ್ ಗಲ್ಲಿ ಒಂದೇ ಬ್ಯಾಂಕ್ ಉಳಿಯಲಿದೆ. ದಶಕಗಳಿಂದ ನಷ್ಟದಲ್ಲಿರುವ ಉತ್ತರ ಭಾರತ ಅನೇಕ ಬ್ಯಾಂಕ್ ಗಳನ್ನು ವಿಲೀನಗೊಳಿಸದೆ, ಅಧಿಕ ಬಂಡವಾಳ ಜೊತೆಗೆ ಲಾಭ ಹೊಂದಿದ್ದ ಸಿಂಡಿಕೇಟ್ ಬ್ಯಾಂಕನ್ನು ವಿಲೀನ ಮಾಡುತ್ತಿರುವುದು, ಕೇಂದ್ರದ ಈ ನಡೆ ಸರಿಯಲ್ಲ. ಇನ್ನೊಂದು ಬ್ಯಾಂಕ್ ಅನ್ನು ತನ್ನಲ್ಲೇ ವಿಲೀನ ಮಾಡಿಕೊಳ್ಳುವಷ್ಟು ಸಾಮರ್ಥ್ಯದ ಸಿಂಡಿಕೇಟ್ ಬ್ಯಾಂಕ್ ರಾಜಕೀಯ ಕುತಂತ್ರಕ್ಕೆ ಬಲಿಯಾಗುತ್ತಿದೆ. ಶತಮಾನದ ಹೊಸ್ತಿಲಲ್ಲಿರುವ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗುತ್ತಿರುವುದು ಎಲ್ಲಾ ನೌಕರರಿಗೂ ಆಘಾತವುಂಟು ಮಾಡಿದೆ ಎಂದರು.