ಮಡಿಕೇರಿ, ಸೆ. 06 (DaijiworldNews/TA): ಮಡಿಕೇರಿ ನಗರಸಭೆ ವ್ಯಾಪ್ತಿಯಲ್ಲಿ ಅಡಿಕೆ ತಟ್ಟೆಗಳು, ಪೇಪರ್ ಕಪ್ಗಳು ಹಾಗೂ ಪೇಪರ್ ಪ್ಲೇಟ್ಗಳ ಬಳಕೆ ಮತ್ತು ಮಾರಾಟಕ್ಕೆ ನಗರಸಭೆ ನಿರ್ಬಂಧ ವಿಧಿಸಿದೆ.

ನಗರಸಭೆ ಆಡಳಿತ ಮಂಡಳಿ ಹಾಗೂ ಪೌರಾಯುಕ್ತರ ಆದೇಶದಂತೆ ಪೇಪರ್ ಕಪ್ಗಳು, ಕಂಟೈನರ್ಗಳು, ಅಡಿಕೆ ತಟ್ಟೆಗಳು, ಕಾಲು, ಅರ್ಧ ಹಾಗೂ ಒಂದು ಲೀಟರ್ ಸಾಮರ್ಥ್ಯದ ನೀರಿನ ಬಾಟಲಿಗಳು ಮತ್ತು ಪೇಪರ್ ಪ್ಲೇಟ್ಗಳ ಬಳಕೆಯನ್ನು ನಿಷೇಧಿಸಲಾಗಿದೆ. ಈ ಕುರಿತು ನಗರಸಭೆ ಅಧಿಕಾರಿಗಳು ವ್ಯಾಪಾರಿಗಳಿಗೆ ಆದೇಶದ ಪ್ರತಿಗಳನ್ನು ವಿತರಿಸಿ ಮಾಹಿತಿ ನೀಡಿದ್ದಾರೆ.
ನಗರಸಭೆಯ ಈ ನಿರ್ಧಾರಕ್ಕೆ ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಅಡಿಕೆ ಎಲೆಗಳಿಂದ ತಯಾರಿಸುವ ತಟ್ಟೆಗಳು ಮಣ್ಣಿನಲ್ಲಿ ಸುಲಭವಾಗಿ ಕೊಳೆಯುವ ಸ್ವಭಾವ ಹೊಂದಿದ್ದು, ಪರಿಸರ ಸ್ನೇಹಿಯಾಗಿವೆ. ದೇವಾಲಯಗಳ ಜಾತ್ರೆ, ಸಾರ್ವಜನಿಕ ಹಾಗೂ ಸರ್ಕಾರಿ ಕಾರ್ಯಕ್ರಮಗಳು ಮತ್ತು ಕ್ರೀಡಾಕೂಟಗಳಲ್ಲಿ ಇವುಗಳನ್ನು ವ್ಯಾಪಕವಾಗಿ ಬಳಸಲಾಗುತ್ತದೆ. ಬಳಕೆಯ ಬಳಿಕ ಅವುಗಳನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಲಾಗುತ್ತದೆ ಎಂದು ಸಾರ್ವಜನಿಕರು ಹಾಗೂ ವ್ಯಾಪಾರಿಗಳು ಅಭಿಪ್ರಾಯಪಟ್ಟಿದ್ದಾರೆ.
ಕೊಡಗು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಯ ಉಪಾಧ್ಯಕ್ಷ ನವೀನ್ ಅಂಬೇಕಲ್ ಅವರು ನಗರಸಭೆಯ ನಿರ್ಧಾರದ ಕುರಿತು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಮಡಿಕೇರಿ ನಗರಸಭೆ ತನ್ನ ವ್ಯಾಪ್ತಿಯಲ್ಲಿ ಇಂತಹ ನಿರ್ಧಾರ ಕೈಗೊಂಡರೂ, ಹೊರ ಪ್ರದೇಶಗಳಿಂದ ಮಡಿಕೇರಿಗೆ ಬರುವವರು ಈ ವಸ್ತುಗಳನ್ನು ತಂದು ಖಾಸಗಿ ಕಾರ್ಯಕ್ರಮಗಳಲ್ಲಿ ಬಳಸುವುದನ್ನು ತಡೆಯುವುದು ಕಷ್ಟ. ಹೀಗಾಗಿ ಜಿಲ್ಲಾ ಆಡಳಿತದೊಂದಿಗೆ ಸಮಾಲೋಚನೆ ನಡೆಸದೆ ನಗರಸಭೆ ಮಾತ್ರ ಇಂತಹ ನಿರ್ಬಂಧ ವಿಧಿಸಿರುವುದು ಸೂಕ್ತವಲ್ಲ ಎಂದು ಅವರು ಹೇಳಿದ್ದಾರೆ. ಈ ರೀತಿಯ ನಿಷೇಧವನ್ನು ಇಡೀ ಕೊಡಗು ಜಿಲ್ಲೆಗೆ ಅನ್ವಯಿಸುವಂತೆ ಮಾಡಿದರೆ ಯಾವುದೇ ಸಮಸ್ಯೆ ಇರುವುದಿಲ್ಲ ಎಂದು ನವೀನ್ ಅಂಬೇಕಲ್ ಅಭಿಪ್ರಾಯಪಟ್ಟಿದ್ದಾರೆ.