ಶಿವಮೊಗ್ಗ, ಸೆ. 06 (DaijiworldNews/TA): ದಾರಿ ತಪ್ಪಿ ಸಂಕಷ್ಟಕ್ಕೆ ಸಿಲುಕಿದ್ದ 14 ವರ್ಷದ ಮೂಕ ಬಾಲಕಿಯೊಬ್ಬಳನ್ನು ಶಿವಮೊಗ್ಗ ಪೊಲೀಸರು ಕೇವಲ ಎರಡು ದಿನಗಳಲ್ಲಿ ಪತ್ತೆಹಚ್ಚಿ ಕುಟುಂಬದವರೊಂದಿಗೆ ಸುರಕ್ಷಿತವಾಗಿ ಸೇರಿಸಿದ್ದಾರೆ. ಪೊಲೀಸರ ಸಮಯಪ್ರಜ್ಞೆ ಹಾಗೂ ವಾಟ್ಸಾಪ್ ಗ್ರೂಪ್ಗಳ ಪರಿಣಾಮಕಾರಿ ಬಳಕೆಯಿಂದ ಬಾಲಕಿ ತನ್ನ ಪೋಷಕರ ಮಡಿಲು ಸೇರಿದ್ದಾಳೆ.

ಚನ್ನಗಿರಿ ತಾಲೂಕಿನ ನಿವಾಸಿಯಾಗಿರುವ ಬಾಲಕಿ ಆಗಸ್ಟ್ 25ರಂದು ಅನಾರೋಗ್ಯದ ಹಿನ್ನೆಲೆಯಲ್ಲಿ ಆಸ್ಪತ್ರೆಗೆ ತೆರಳಲು ಬಸ್ ಹತ್ತಿದ್ದಳು. ಸಾಮಾನ್ಯವಾಗಿ ಆಕೆ ಒಬ್ಬಳೇ ಆಸ್ಪತ್ರೆಗೆ ತೆರಳಿ ವಾಪಸ್ ಬರುತ್ತಿದ್ದಳು. ಆದರೆ, ಅಂದು ತಾನು ಇಳಿಯಬೇಕಿದ್ದ ಬಸ್ ನಿಲ್ದಾಣವನ್ನು ತಪ್ಪಿಸಿಕೊಂಡಿದ್ದಾಳೆ. ಹೀಗಾಗಿ ಸುಮಾರು 30 ಕಿ.ಮೀ. ದೂರದಲ್ಲಿರುವ ತಮ್ಮಡಿಹಳ್ಳಿಗೆ ಬಾಲಕಿ ತಲುಪಿದ್ದಳು. ಬಸ್ನ ಕೊನೆಯ ನಿಲ್ದಾಣ ಬಂದ ಬಳಿಕ ಇಳಿಯುವಂತೆ ಕಂಡಕ್ಟರ್ ಸೂಚಿಸಿದಾಗ ಬಾಲಕಿ ಗೊಂದಲಕ್ಕೊಳಗಾಗಿದ್ದಾಳೆ. ಆಕೆಗೆ ಮಾತನಾಡಲು ಸಾಧ್ಯವಾಗದಿರುವುದನ್ನು ಗಮನಿಸಿದ ಬಸ್ ಕಂಡಕ್ಟರ್ ಹಾಗೂ ಪ್ರಯಾಣಿಕರು ತಕ್ಷಣ 112 ತುರ್ತು ಸಹಾಯವಾಣಿಗೆ ಕರೆ ಮಾಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಲಕಿಯನ್ನು ಸುರಕ್ಷಿತವಾಗಿ ರಕ್ಷಿಸಿದ್ದಾರೆ. ಬಳಿಕ ಆಕೆಯನ್ನು ಮಕ್ಕಳ ಕಲ್ಯಾಣ ಸಮಿತಿ (CWC) ಮುಂದೆ ಹಾಜರುಪಡಿಸಿ, ಸರ್ಕಾರಿ ಮಕ್ಕಳ ಆರೈಕೆ ಕೇಂದ್ರಕ್ಕೆ ದಾಖಲಿಸಿದ್ದಾರೆ. ಇತ್ತ ಮಗಳು ಮನೆಗೆ ಮರಳದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಚನ್ನಗಿರಿ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದರು. ಬಾಲಕಿ ಅಪ್ರಾಪ್ತೆಯಾಗಿದ್ದ ಕಾರಣ ಆರಂಭದಲ್ಲಿ ಆಕೆಯ ಫೋಟೋವನ್ನು ಸಾರ್ವಜನಿಕವಾಗಿ ಹಂಚಿಕೊಳ್ಳದೆ, ಹಿರಿಯ ಅಧಿಕಾರಿಗಳ ಸೂಚನೆಯಂತೆ ಪೊಲೀಸರ ಆಂತರಿಕ ವಾಟ್ಸಾಪ್ ಗ್ರೂಪ್ಗಳಲ್ಲಿ ಹಂಚಿಕೊಳ್ಳಲಾಯಿತು. ಈ ಫೋಟೋ ಸ್ಥಳೀಯ ಪೊಲೀಸ್ ಅಧಿಕಾರಿಯೊಬ್ಬರ ವಾಟ್ಸಾಪ್ ಮೂಲಕ ಬಾಲಕಿಯ ಸಹೋದರನ ಗಮನಕ್ಕೆ ಬಂದಿದೆ. ಫೋಟೋ ನೋಡಿದ ಆತ, ಆಕೆ ತನ್ನ ತಂಗಿಯೇ ಎಂದು ತಕ್ಷಣ ಗುರುತಿಸಿದ್ದಾನೆ.
ಬಾಲಕಿಯ ಗುರುತು ದೃಢಪಡಿಸಿದ ಬಳಿಕ ಪೊಲೀಸರು ಅಗತ್ಯ ದಾಖಲೆಗಳನ್ನು ಪರಿಶೀಲಿಸಿ, ಮಕ್ಕಳ ಕಲ್ಯಾಣ ಸಮಿತಿಯ ನಿಯಮಾನುಸಾರ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದ್ದಾರೆ. ಬಳಿಕ ಆಗಸ್ಟ್ 27ರಂದು ಬಾಲಕಿಯನ್ನು ಆಕೆಯ ಪೋಷಕರಿಗೆ ಸುರಕ್ಷಿತವಾಗಿ ಹಸ್ತಾಂತರಿಸಲಾಗಿದೆ. ಪೊಲೀಸರ ತ್ವರಿತ ಕಾರ್ಯಾಚರಣೆ, ಇಲಾಖೆಯೊಳಗಿನ ಸಮನ್ವಯ ಹಾಗೂ ತಂತ್ರಜ್ಞಾನದ ಪರಿಣಾಮಕಾರಿ ಬಳಕೆಯಿಂದಾಗಿ ದಾರಿ ತಪ್ಪಿದ್ದ ಬಾಲಕಿ ಕೇವಲ ಎರಡು ದಿನಗಳಲ್ಲಿ ಕುಟುಂಬದೊಂದಿಗೆ ಪುನರ್ಮಿಲನಗೊಂಡಿದ್ದಾಳೆ.