ಮುನ್ನಾರ್, ಸೆ. 06 (DaijiworldNews/TA): ಅಪರೂಪದ ನೀಲಕುರಿಂಜಿ ಹೂವುಗಳನ್ನು ಕಿತ್ತು ಕಿರೀಟ ಹಾಗೂ ಹೂಗುಚ್ಛ ಮಾಡಿಕೊಂಡು ಫೋಟೋಶೂಟ್ ನಡೆಸಿ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದ ಇಬ್ಬರ ವಿರುದ್ಧ ಅರಣ್ಯ ಇಲಾಖೆ ಪ್ರಕರಣ ದಾಖಲಿಸಿದೆ.

ಚೋಕ್ರಮುಡಿ ಹಾಗೂ ಚಿನ್ನಕನ್ನಲ್ ಪ್ರದೇಶಗಳಲ್ಲಿ ಸದ್ಯ ನೀಲಕುರಿಂಜಿ ಹೂವುಗಳು ಅರಳಿದ್ದು, ಇದನ್ನು ವೀಕ್ಷಿಸಲು ಪ್ರವಾಸಿಗರಿಗೆ ಅವಕಾಶ ನೀಡಲಾಗಿದೆ. ಆದರೆ ಸಂರಕ್ಷಿತ ಸಸ್ಯವಾಗಿರುವ ನೀಲಕುರಿಂಜಿ ಹೂವುಗಳನ್ನು ಕೀಳದಂತೆ ಪ್ರವಾಸಿಗರಿಗೆ ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ. ಈ ಸೂಚನೆಯನ್ನು ಉಲ್ಲಂಘಿಸಿ ಇಬ್ಬರು ವ್ಯಕ್ತಿಗಳು ನೀಲಕುರಿಂಜಿ ಹೂವುಗಳನ್ನು ಕಿತ್ತು, ತಲೆಗೆ ಕಿರೀಟದಂತೆ ಧರಿಸಿ ಹಾಗೂ ಕೈಯಲ್ಲಿ ಹೂಗುಚ್ಛದಂತೆ ಹಿಡಿದು ಫೋಟೋಶೂಟ್ ನಡೆಸಿದ್ದಾರೆ. ಬಳಿಕ ಈ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದು, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿವೆ.
ವೈರಲ್ ದೃಶ್ಯಗಳು ಅರಣ್ಯ ಇಲಾಖೆಯ ಗಮನಕ್ಕೆ ಬಂದ ಬಳಿಕ ಮುನ್ನಾರ್ ಡಿಎಫ್ಒ ಸೂಚನೆಯ ಮೇರೆಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಲಾಗಿದೆ. ಪ್ರಕರಣ ದಾಖಲಾದ ಇಬ್ಬರಲ್ಲಿ ಒಬ್ಬರು ಇಡುಕ್ಕಿ ಹಾಗೂ ಮತ್ತೊಬ್ಬರು ಎರ್ನಾಕುಲಂ ಮೂಲದವರು ಎಂದು ವರದಿಯಾಗಿದೆ. ನೀಲಕುರಿಂಜಿ ಹೂವುಗಳನ್ನು ಕೀಳುವುದು ಕಾನೂನುಬಾಹಿರವಾಗಿದ್ದು, ಆರೋಪ ಸಾಬೀತಾದರೆ ರೂ.25,000ವರೆಗೆ ದಂಡ ಹಾಗೂ ಗರಿಷ್ಠ ಮೂರು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದಾಗಿದೆ ಎಂದು ವರದಿಯಾಗಿದೆ. ಹಲವರು ತಮ್ಮ ಇನ್ಸ್ಟಾಗ್ರಾಮ್ ಖಾತೆಗಳಲ್ಲಿ ನೀಲಕುರಿಂಜಿ ಹೂವುಗಳನ್ನು ಕಿತ್ತು ಹೂಗುಚ್ಛಗಳೊಂದಿಗೆ ಫೋಟೋಗಳನ್ನು ಹಂಚಿಕೊಂಡಿರುವುದು ಅರಣ್ಯ ಇಲಾಖೆಯ ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಇಂತಹ ಪ್ರಕರಣಗಳ ವಿರುದ್ಧ ಕ್ರಮ ಮತ್ತಷ್ಟು ಬಿಗಿಯಾಗುವ ಸಾಧ್ಯತೆಯಿದೆ.
ನೀಲಕುರಿಂಜಿ ಅರಳಿರುವ ಪ್ರದೇಶಗಳಿಗೆ ಪ್ರವಾಸಿಗರಿಗೆ ಭೇಟಿ ನೀಡಲು ಅವಕಾಶ ಕಲ್ಪಿಸಲಾಗಿದ್ದರೂ, ಹೂವುಗಳನ್ನು ಕೀಳುವುದು, ಸಸ್ಯಗಳಿಗೆ ಹಾನಿ ಮಾಡುವುದು ಹಾಗೂ ಇತರರನ್ನೂ ಹೂವು ಕೀಳಲು ಪ್ರೇರೇಪಿಸುವ ರೀತಿಯಲ್ಲಿ ಸಾಮಾಜಿಕ ಮಾಧ್ಯಮದಲ್ಲಿ ಚಿತ್ರಗಳನ್ನು ಹಂಚಿಕೊಳ್ಳುವುದನ್ನು ಅರಣ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿದೆ. ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಳ್ಳಿ, ಆದರೆ ನೀಲಕುರಿಂಜಿಯನ್ನು ಕೀಳದೆ ಸಂರಕ್ಷಿಸಿ ಎಂಬ ಸಂದೇಶವನ್ನು ಅರಣ್ಯ ಇಲಾಖೆ ನೀಡಿದೆ.