ಬೆಂಗಳೂರು, ಸೆ. 06 (DaijiworldNews/AA): ಇಂದಿರಾ ಕಿಟ್ ಯೋಜನೆ ಅನುಷ್ಠಾನಗೊಳ್ಳದಿರುವುದರ ಹಿಂದೆ ಕೇವಲ ಬೆಲೆ ಏರಿಕೆಯ ನೆಪ ಮಾತ್ರವಲ್ಲ, ಬೃಹತ್ ಕಮಿಷನ್ ದಂಧೆ ಮತ್ತು ರಾಜ್ಯ ಸರ್ಕಾರದ ಹಣಕಾಸು ದಿವಾಳಿತನ ಅಡಗಿದೆ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ತೀವ್ರವಾಗಿ ಆರೋಪಿಸಿದ್ದಾರೆ.

ಸಾಮಾಜಿಕ ಜಾಲತಾಣದಲ್ಲಿ ಈ ಕುರಿತು ವಾಗ್ದಾಳಿ ನಡೆಸಿರುವ ಅವರು, "ಅನ್ನಭಾಗ್ಯ ಯೋಜನೆಯಡಿ ಬಡವರಿಗೆ ಉಚಿತ ಅಕ್ಕಿ ನೀಡಲು ಸಾಧ್ಯವಾಗದೆ, ಬಜೆಟ್ನಲ್ಲಿ ಕೇವಲ ಗಿಮಿಕ್ಗಾಗಿ ರಾಜ್ಯ ಸರ್ಕಾರ ಇಂದಿರಾ ಕಿಟ್ ಯೋಜನೆಯನ್ನು ಘೋಷಿಸಿತ್ತು. ಆದರೆ ವರ್ಷವೊಂದೇ ಕಳೆದರೂ ಈವರೆಗೆ ಅದಕ್ಕೆ ಸಂಬಂಧಿಸಿದ ಟೆಂಡರ್ ಪ್ರಕ್ರಿಯೆಯನ್ನೇ ಪೂರ್ಣಗೊಳಿಸಿಲ್ಲ" ಎಂದು ದೂರಿದ್ದಾರೆ.
"ರಾಜ್ಯದ ಖಜಾನೆ ಸಂಪೂರ್ಣ ಖಾಲಿಯಾಗಿ ಬಡವರ ಯೋಜನೆಗಳಿಗೆ ಹಣವಿಲ್ಲದಂತಾಗಿದೆಯೇ? ಬೆಲೆ ಏರಿಕೆಯ ನೆಪ ಹೇಳಿ ಯೋಜನೆಯನ್ನೇ ಕೈಬಿಡಲು ಹೊರಟಿರುವುದರ ಹಿಂದಿನ ಅಸಲಿ ಕಾರಣವೇನು?" ಎಂದು ಪ್ರಶ್ನಿಸಿದ್ದಾರೆ.
"ರಾಜ್ಯ ಸರ್ಕಾರ ಕೊಟ್ಟ ಮಾತಿನಂತೆ ತಕ್ಷಣವೇ ಪಾರದರ್ಶಕವಾಗಿ ಇಂದಿರಾ ಕಿಟ್ ವಿತರಣೆಯನ್ನು ಆರಂಭಿಸಬೇಕು. ಇಲ್ಲವಾದಲ್ಲಿ ಸರ್ಕಾರದ ಈ ಜನವಿರೋಧಿ ನೀತಿಯ ವಿರುದ್ಧ ಬಿಜೆಪಿ ಬೀದಿಗಿಳಿದು ಹೋರಾಟ ನಡೆಸುವುದು ಖಚಿತ" ಎಂದು ಎಚ್ಚರಿಸಿದ್ದಾರೆ.