ದೆಹಲಿ, ಸೆ. 06 (DaijiworldNews/AA): 2029ರ ವೇಳೆಗೆ ಭಾರತವನ್ನು ಮಾದಕವಸ್ತು ಮುಕ್ತ ದೇಶವನ್ನಾಗಿಸಲು ಕೇಂದ್ರ ಸರ್ಕಾರ ಕಾರ್ಯಯೋಜನೆ ರೂಪಿಸಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ತಿಳಿಸಿದ್ದಾರೆ.

"ಮಾದಕವಸ್ತು ಮುಕ್ತ ಯುವಶಕ್ತಿಯೇ 2047ರ ವೇಳೆಗೆ ವಿಕಸಿತ ಭಾರತ ನಿರ್ಮಾಣಕ್ಕೆ ಕಾರಣವಾಗಬೇಕು ಎಂಬುದು ಪ್ರಧಾನಿ ನರೇಂದ್ರ ಮೋದಿ ಅವರ ಆಶಯವಾಗಿದೆ. ನಕ್ಸಲಿಸಂ ಮತ್ತು ಭಯೋತ್ಪಾದನೆಯಂತಹ ಸಮಸ್ಯೆಗಳನ್ನು ನಿರ್ಮೂಲನೆ ಮಾಡಲು ಸರ್ಕಾರ ಕೈಗೊಂಡಿರುವ ಪ್ರಯತ್ನಗಳಂತೆಯೇ, ಅಭಿವೃದ್ಧಿ ಹೊಂದಿದ ಭಾರತದ ಕನಸನ್ನು ನನಸಾಗಿಸಲು ದೇಶವನ್ನು ಮಾದಕವಸ್ತು ಮುಕ್ತಗೊಳಿಸಲು ಮೋದಿ ಸರ್ಕಾರ ಬದ್ಧವಾಗಿದೆ" ಎಂದರು
"ಡ್ರಗ್-ಫ್ರೀ ಇಂಡಿಯಾ ಗುರಿಯ ಭಾಗವಾಗಿ 2029ರ ವೇಳೆಗೆ ಮಾದಕವಸ್ತು ಕಳ್ಳಸಾಗಣೆ, ಹಣಕಾಸು ನೆರವು ಸೇರಿದಂತೆ ಸಂಪೂರ್ಣ ಮಾದಕವಸ್ತು ಜಾಲವನ್ನು ನಾಶಪಡಿಸುವುದರಿಂದ ಹಿಡಿದು ವ್ಯಸನಿಗಳ ಪುನರ್ವಸತಿ ತನಕ ಸಮನ್ವಯದ ರಾಷ್ಟ್ರಮಟ್ಟದ ಕಾರ್ಯತಂತ್ರವನ್ನು ಕೇಂದ್ರ ಸರ್ಕಾರ ಅಳವಡಿಸಿಕೊಂಡಿದೆ. ಮಾದಕವಸ್ತು ಮುಕ್ತ ಯುವಶಕ್ತಿಯೇ 2047ರ ವೇಳೆಗೆ ವಿಕಸಿತ ಭಾರತವನ್ನು ಮುನ್ನಡೆಸಬೇಕು ಎಂಬುದು ನರೇಂದ್ರ ಮೋದಿ ಅವರ ಗುರಿ" ಎಂದು ನುಡಿದರು.
"2014ಕ್ಕೂ ಮೊದಲು ಮಾದಕವಸ್ತುಗಳ ವಿರುದ್ಧದ ಹೋರಾಟವು ಸಣ್ಣ ಘಟಕಗಳಲ್ಲಿ ಪ್ರತ್ಯೇಕವಾಗಿ ನಡೆಯುತ್ತಿತ್ತು. ತನಿಖಾ ಸಂಸ್ಥೆಗಳು ಸಣ್ಣಪುಟ್ಟ ಆರೋಪಿಗಳನ್ನು ಬಂಧಿಸುವುದಕ್ಕೇ ತೃಪ್ತಿಪಡುತ್ತಿದ್ದವು. ಆದರೆ ನಮ್ಮ ಸರ್ಕಾರ ಈ ಹೋರಾಟವನ್ನು ರಾಷ್ಟ್ರೀಯ ಭದ್ರತೆಯ ಆದ್ಯತೆಯನ್ನಾಗಿ ಮಾಡಿದೆ" ಎಂದು ಹೇಳಿದರು.
"ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ವಿಶೇಷ ಮಾದಕವಸ್ತು ವಿರೋಧಿ ಕಾರ್ಯಪಡೆಗಳನ್ನು ರಚಿಸಲಾಗಿದ್ದು, ಸ್ಥಳೀಯ ಪೊಲೀಸರನ್ನೂ ರಾಷ್ಟ್ರೀಯ ಕಾರ್ಯತಂತ್ರದೊಂದಿಗೆ ಸಂಪರ್ಕಿಸಲಾಗಿದೆ. ದೊಡ್ಡ ಮಾದಕವಸ್ತು ಜಾಲಗಳು, ಅವುಗಳ ಅಂತಾರಾಷ್ಟ್ರೀಯ ಸಂಪರ್ಕಗಳು ಹಾಗೂ ಕಾರ್ಯಾಚರಣೆಯಲ್ಲಿನ ಲೋಪಗಳ ವಿರುದ್ಧ ಕೇಂದ್ರ ಮತ್ತು ರಾಜ್ಯ ತನಿಖಾ ಸಂಸ್ಥೆಗಳು ಜಂಟಿಯಾಗಿ ನಿರ್ಧಾರ ಕೈಗೊಳ್ಳಲು 2019ರಲ್ಲಿ ಜಂಟಿ ಸಮನ್ವಯ ಸಮಿತಿಯನ್ನೂ ರಚಿಸಲಾಗಿದೆ" ಎಂದು ಮಾಹಿತಿ ನೀಡಿದರು.