ಶಿರಸಿ, ಸೆ 13 (Daijiworld News/RD): ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಮೊಬೈಲ್ ಬಳಕೆ ಮಾಡಬಾರದು ಎಂದು ಎಷ್ಷೇ ವಾರ್ನಿಂಗ್ ಕೊಟ್ಟರು ಕ್ಯಾರೇ ಮಾಡದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ತಕ್ಕ ಪಾಠ ಕಲಿಸಿದ್ದಾರೆ. ಶಿರಸಿ ಎಂಇಎಸ್ ಚೈತನ್ಯ ಪಿಯು ಕಾಲೇಜಿನಲ್ಲಿ ವಿದ್ಯಾರ್ಥಿಗಳಿಂದ ಮೊಬೈಲ್ ಸೆಟ್ ಗಳನ್ನು ವಶಪಡಿಸಿಕೊಂಡು ಅವರ ಸಮ್ಮುಖದಲ್ಲೇ ಮೊಬೈಲ್ ಅನ್ನು ಸುತ್ತಿಗೆಯಿಂದ ಪುಡಿ ಪುಡಿ ಮಾಡಿ ವಿದ್ಯಾರ್ಥಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಈ ಕಾಲೇಜಿನಲ್ಲಿ ಮೊಬೈಲ್ ಬಳಕೆಯನ್ನು ಈಗಾಗಲೇ ನಿಷೇಧಿಸಲಾಗಿದೆ. ಆದರೂ ವಿದ್ಯಾರ್ಥಿಗಳು ಮೊಬೈಲ್ ಬಳಸುತ್ತಿದ್ದರು. ಈ ವಿಷಯ ಪ್ರಿನ್ಸಿಪಾಲ್ ಆರ್ ಎಂ ಭಟ್ ಅವರ ಗಮನಕ್ಕೆ ಬಂದಿತ್ತು. ಇದಕ್ಕೆ ತಕ್ಕ ಪಾಠ ಕಲಿಸಬೇಕೆಂದು ಯೋಚಿಸಿದ ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳ ಸಮ್ಮುಖದಲ್ಲೇ ಮೊಬೈಲ್ ಅನ್ನು ಸುತ್ತಿಗೆಯಿಂದ ಪುಡಿ ಪುಡಿ ಮಾಡಿ, ಮೊಬೈಲ್ ಬಳಕೆಯಿಂದ ಉಂಟಾಗುವ ಹಾನಿಯ ಕುರಿತು ಉಪನ್ಯಾಸ ನೀಡಿದರು. ಕಾಲೇಜು ಆವರಣದಲ್ಲಿ ಮೊಬೈಲ್ ಬಳಕೆ ನಿಷೇಧಿಸಿದ್ದು, ಈ ನಿಯಮವನ್ನು ಮೀರಬಾರದು ಎಂದು ಹೇಳಿದರು. ಇದಕ್ಕೆ ತಕ್ಕಂತೆ ಜೊತೆಗೆ ಪಿಯು ಬೋರ್ಡ್ ನಿಯಮಾವಳಿಯು ಅನ್ವಯವಾಗುತ್ತದೆ ಎಂದರು.
ಅತಿಯಾದ ಮೊಬೈಲ್ ಬಳಕೆಯಿಂದ ಮಕ್ಕಳಲ್ಲಿ ಕಿವುಡುತನ, ಕಣ್ಣಿನ ದೃಷ್ಟಿ ಅಸ್ಪಷ್ಟವಾಗುವುದು, ಕುತ್ತಿಗೆ ನೋವು, ಮಾನಸಿಕ ಖಿನ್ನತೆ ಎದುರಾಗುತ್ತದೆ. ಮೊಬೈಲ್ ರೇಡಿಯೇಶನ್ ಮಕ್ಕಳಲ್ಲಿಏಕಾಗ್ರತೆ ಕಡಿಮೆ ಮಾಡುವ ಜತೆಯಲ್ಲಿ ಮರೆಗುಳಿತನವನ್ನೂ ಹೆಚ್ಚಿಸುತ್ತದೆ ಎಂದು ವಿಜ್ಞಾನಿಗಳು ಹೇಳುತ್ತಾರೆ. ಅಗತ್ಯಕ್ಕಿಂತ ಹೆಚ್ಚು ವೇಳೆ ಸಾಮಾಜಿಕ ಜಾಲತಾಣದಲ್ಲಿ ಕಾಲಹರಣ ಮಾಡುವ ಬದಲು ವಿದ್ಯಾರ್ಥಿಗಳು ಏಕಾಗ್ರತೆಯಿಂದ ಓದಿನಲ್ಲಿ ಸಾಧನೆ ಸಾಧ್ಯವಾಗುತ್ತದೆ. ಪಾಲಕರೂ ಮಕ್ಕಳು ಟಿವಿ ಮತ್ತು ಮೊಬೈಲ್ಗಳಿಂದ ದೂರವಿರುವಂತೆ ಕಾಳಜಿ ವಹಿಸಬೇಕು. ಹೆಚ್ಚಿನ ಸಮಯ ಮಕ್ಕಳೊಂದಿಗೆ ಸಂವಹನ ನಡೆಸಬೇಕು ಎಂದರು. ಇದೀಗ ಪ್ರಾಂಶುಪಾಲರು ಮೊಬೈಲ್ ಒಡೆದು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.