ಮೈಸೂರು, ಸೆ 13 (Daijiworld News/RD): ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆದವರು. ಅದೃಷ್ಟ ಯಾರ ಅಪ್ಪನ ಸ್ವತ್ತು ಅಲ್ಲ ಎಂದು ಹೆಚ್ಡಿಕೆಗೆ ಸಚಿವ ವಿ. ಸೋಮಣ್ಣ ತಿರುಗೇಟು ನೀಡಿದ್ದಾರೆ.
ಸೋಮಣ್ಣ ಅವರು ವಸತಿ ಸಚಿವರೋ ಅಥವಾ ದಸರಾ ಸಚಿವರಾಗಿದ್ದಾರೋ ಎಂಬುವುದು ಗೊತ್ತಾಗುತ್ತಿಲ್ಲ ಎಂದು ಹೆಚ್ ಡಿ ಕೆ ಹೇಳಿಕೆ ನೀಡಿದ್ದರು. ಈ ಹೇಳಿಕೆಗೆ ಪ್ರತಿಕ್ರಿಯಿಸಿದ ಸಚಿವ ವಿ. ಸೋಮಣ್ಣ, ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆದವರು. ಅದೃಷ್ಟ ಯಾರ ಅಪ್ಪನ ಸ್ವತ್ತು ಅಲ್ಲ ಎಂದು ಹೆಚ್ಡಿಕೆಗೆ ಸಚಿವ ವಿ. ಸೋಮಣ್ಣ ವ್ಯಂಗ್ಯವಾಡಿದ್ದಾರೆ.
ಮಾಜಿ ಸಿಎಂ ಕುಮಾರಸ್ವಾಮಿ ಅವರು ರಾಜಕಾರಣಕ್ಕೆ ಬಂದಿದ್ದು 1996ರಲ್ಲಿ. ನಾನು ರಾಜಕಾರಣಕ್ಕೆ ಬಂದಿದ್ದು 1983ರಲ್ಲಿ. ಕುಮಾರಸ್ವಾಮಿ ಅವರು ಎರಡು ಬಾರಿ ಮುಖ್ಯಮಂತ್ರಿ ಆಗಿದ್ದರು, ಹಾಗಾಗಿ ಅವರ ಕಾರ್ಯವೈಖರಿಯ ಬಗ್ಗೆ ಅವರೇ ಆತ್ಮಾವಲೋಕನ ಮಾಡಿಕೊಂಡರೆ ಉತ್ತಮ ಎಂದು ಸೋಮಣ್ಣ ಹೇಳಿದರು. ದಸರ ನಾಡ ಹಬ್ಬವಾಗಿದ್ದು, ಎಲ್ಲರ ಸಹಕಾರದಿಂದ ಮಾಡುತ್ತಿದ್ದೇನೆ. ದಸರಾ ಮುಗಿದ ನಂತರ ಒಂದು ನಿಮಿಷವೂ ವ್ಯರ್ಥ ಮಾಡದೇ ವಸತಿ ಇಲಾಖೆಯಲ್ಲಿ ಕೆಲಸ ಮಾಡುತ್ತೇನೆ ಎಂದು ತಿಳಿಸಿದರು.
ದಸರ ಹಬ್ಬ ಅಧಿಕಾರಿಗಳಿಗಾಗಿ ಇರುವ ಹಬ್ಬ ಅಲ್ಲ. ದೇಶಾದ್ಯಂತ ಈ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಾರೆ ಅದರಲ್ಲೂ ಮೈಸೂರಿನಲ್ಲಿ ವಿಜೃಂಭಣೆಯಿಂದ ಆಚರಿಸುತ್ತಾ ಬಂದಿರುವುದನ್ನು ಕಾಣಬಹುದು, ಇಡೀ ವಿಶ್ವಕ್ಕೆ ಮೈಸೂರು ಮಹಾರಾಜರು ಕೊಟ್ಟ ಕಾಣಿಕೆ ಈ ಹಬ್ಬ. ಇದನ್ನ ಕುಮಾರಸ್ವಾಮಿ ಅರಿತುಕೊಂಡರೆ ಒಳ್ಳೆಯದು ಎಂದು ಸೋಮಣ್ಣ ಚಾಟಿ ಬೀಸಿದರು.