ನವದೆಹಲಿ, ಸೆ 13 (Daijiworld News/MSP): ಸಾಮಾಜಿಕ ಜಾಲತಾಣಗಳಾದ ಫೇಸ್ಬುಕ್ ಮತ್ತು ವಾಟ್ಸ್ ಆ್ಯಪ್ ನೊಂದಿಗೆ ಆಧಾರ್ ಅನ್ನು ಜೋಡಿಸಲು ಯಾವುದಾದರೂ ಮಾರ್ಗಸೂಚಿಗಳನ್ನು ತಯಾರು ಮಾಡುತ್ತಿದ್ದೀರಾ ಎಂದು ಕೇಂದ್ರ ಸರ್ಕಾರವನ್ನು ಸುಪ್ರೀಂ ಕೋರ್ಟ್ ಶುಕ್ರವಾರ ಪ್ರಶ್ನಿಸಿದೆ.
ಕೇಂದ್ರ ಸರ್ಕಾರವನ್ನು , ನ್ಯಾಯಮೂರ್ತಿ ದೀಪಕ್ ಗುಪ್ತಾ ನೇತೃತ್ವದ 9 ನ್ಯಾಯಾಧೀಶರಿರುವ ನ್ಯಾಯಪೀಠವು ಈ ಬಗ್ಗೆ ಪ್ರಶ್ನಿಸಿದ್ದು, ಸಾಮಾಜಿಕ ಜಾಲತಾಣವನ್ನು ನಿಯಂತ್ರಿಸುವ ಮಾರ್ಗಸೂಚಿಗಳ ಬಗ್ಗೆ ವಿವರ ಕೇಳಿತು.
ಕೋರ್ಟ್ ತೀರ್ಪು ನೀಡುವ ಮುಂಚೆ ಮುಂಬಯಿ, ಮಧ್ಯಪ್ರದೇಶ ಮತ್ತು ಮದ್ರಾಸ್ ಹೈಕೋರ್ಟ್ ಹೀಗೆ ವಿವಿಧೆಡೆಯಲ್ಲಿ ಸಲ್ಲಿಕೆಯಾಗಿರುವ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ವರ್ಗ ಮಾಡುವಂತೆ ಫೇಸ್ಬುಕ್ ಮತ್ತು ವಾಟ್ಸಾಪ್ ಸಂಸ್ಥೆ ಮನವಿ ಮಾಡಿಕೊಂಡಿದೆ.
ಫೇಸ್ಬುಕ್ ಮತ್ತು ವಾಟ್ಸಾಪ್ ಆಧಾರ್ ಸಂಪರ್ಕವನ್ನು ತೀವ್ರವಾಗಿ ವಿರೋಧಿಸಿದ್ದು, ಇದು ತನ್ನ ಬಳಕೆದಾರರ ಗೌಪ್ಯತೆಗೆ ಧಕ್ಕೆ ತರುತ್ತದೆ ಎಂದು ಹೇಳಿದೆ. ಸುಪ್ರೀಂ ಕೋರ್ಟ್ ನ ಒಂಬತ್ತು ನ್ಯಾಯಾಧೀಶರ ಪೀಠವು ಗೌಪ್ಯತೆಯನ್ನು ಸಂವಿಧಾನದ 21ನೇ ಪರಿಚ್ಛೇದದ ಅಡಿಯಲ್ಲಿ ಮೂಲಭೂತ ಹಕ್ಕು ಎಂದು ಎತ್ತಿಹಿಡಿದಿದೆ ಎಂದು ಹೇಳಿದೆ. ಆದರೆ,ಸಾಮಾಜಿಕ ಜಾಲತಾಣದಲ್ಲಿ ಆಧಾರ್ ಅನ್ನು ಲಿಂಕ್ ಮಾಡುವುದರ ಮೂಲಕ, ಅಪರಾಧಿಯನ್ನು ಗುರುತಿಸುವುದು ಸುಲಭವಾಗುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. ಸುಪ್ರೀಂ ನ್ಯಾಯಪೀಠವು ಮುಂದಿನ ವಿಚಾರಣೆಯನ್ನು ಸೆಪ್ಟೆಂಬರ್ 24ಕ್ಕೆ ನಿಗದಿಪಡಿಸಿದೆ.