ಕೋಲ್ಕತಾ, ಸೆ 13(DaijiworldNews/SM): ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿಯವರಿಗೆ ತೀವ್ರ ಹಿನ್ನಡೆಯುಂಟಾಗಿದೆ. ಇದೀಗ ಕೇಂದ್ರ ತನಿಖಾ ದಳ ಮತ್ತು ಮಮತಾ ಅವರ ನಡುವೆ, ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಕ್ಕೆ ವೇದಿಕೆ ಸಜ್ಜಾಗುತ್ತಿದೆ.
ಒಂದೊಮ್ಮೆ ರಿಲೀಫ್ ಪಡೆದುಕೊಂಡಿದ್ದ ಶಾರದಾ ಚಿಟ್ ಫಂಡ್ ಹಗರಣ ಮತ್ತೆ ಜೀವ ಪಡೆದುಕೊಂಡಿದೆ. ಶಾರದಾ ಚಿಟ್ ಫಂಡ್ ಹಗರಣ ಪ್ರಕರಣದಲ್ಲಿ ಸಿಬಿಐ ಬಂಧನದಿಂದ ರಕ್ಷಣೆ ಕೋರಿ ಮಹಾನಗರದ ಮಾಜಿ ಪೊಲೀಸ್ ಆಯುಕ್ತರು ಕೋರ್ಟ್ ಮೊರೆ ಹೋಗಿದ್ದರು. ಆದರೆ ಇದೀಗ ಹೈಕೋರ್ಟ್ ಆದೇಶ ನೀಡಿದ್ದು, ರಕ್ಷಣೆಯನ್ನು ಹಿಂಪಡೆದುಕೊಂಡಿದೆ.
ಮಮತಾ ಬ್ಯಾನರ್ಜಿಯವರ ಪರಮಾಪ್ತ ಮತ್ತು ಕೋಲ್ಕತಾ ಮಹಾನಗರದ ಪೊಲೀಸ್ ಆಯುಕ್ತರಾದ ರಾಜೀವ್ ಕುಮಾರ್ ಅವರನ್ನು ಬಂಧಿಸಲು ಕೆಲವು ತಿಂಗಳ ಹಿಂದೆ ಸಿಬಿಐ ಮುಂದಾಗಿತ್ತು. ಆದರೆ, ಆ ಸಂದರ್ಭ ಸಿಎಂ ಮಮತಾ ಬ್ಯಾನರ್ಜಿಯವರೇ ಅಲ್ಲಿ ಮಾಜಿ ಅಧಿಕಾರಿಗೆ ರಕ್ಷಣೆ ನೀಡಿದ್ದರು.
ಆದರೆ, ಇದೀಗ ಕೊಲ್ಕತ್ತಾ ಹೈಕೋರ್ಟ್ ತೀರ್ಪು ಪ್ರಕಟಿಸಿದ್ದು, ಈ ತೀರ್ಪು ಮಾಜಿ ಅಧಿಕಾರಿಗೆ ಹಾಗೂ ಸಿಎಂ ಮಮತಾ ಬ್ಯಾನರ್ಜಿಗೆ ತಲೆನೋವಾಗಿ ಪರಿಣಮಿಸಿದೆ. ಹಾಗೂ ಈ ತೀರ್ಪಿನಿಂದ ಇವರಿಗೆ ತೀವ್ರ ಹಿನ್ನಡೆಯಾದಂತಗಿದೆ. ಹೈಕೋರ್ಟ್ ರಕ್ಷಣೆ ಸ್ಥಗಿತಗೊಂಡಿರುವುದರಿಂದ, ರಾಜ್ಯದ ಹಿರಿಯ ಪೊಲೀಸ್ ಅಧಿಕಾರಿಗಳಿಗೆ ಬಂಧನದ ಭೀತಿ ಎದುರಾಗಿದೆ.
ಈ ಹಿಂದೆ ಪೊಲೀಸ್ ಕಮಿಷನರ್ ಮನೆಗೆ ಬಂದಿದ್ದ ಸಿಬಿಐ ಅಧಿಕಾರಿಗಳಿಗೆ ಮಮತಾ ಸವಾಲು ಹಾಕಿದ್ದರು. ಮಾತ್ರವಲ್ಲದೆ, ವಾರಂಟ್ ಇಲ್ಲದೆ ಮನೆಗೆ ಬರಲು ಎಷ್ಟು ದೈರ್ಯ ಎಂದು ಸವಾಲು ಹಾಕಿದ್ದರು. ಹಾಗೂ ಅಧಿಕಾರಿಗಳನ್ನು ವಾಪಸ್ ಕಳುಹಿಸಿದ್ದರು.
ಇಷ್ಟೆಲ್ಲ ನಡೆದ ಬಳಿಕ ಒಂದಿಷ್ಟು ಶಾಂತಗೊಂಡಿದ್ದ ಪ್ರಕರಣ ಇದೀಗ ಮರು ಜೀವ ಪಡೆದುಕೊಂಡಿದ್ದು, ಮಾಜಿ ಅಧಿಕಾರಿಯೊಬ್ಬರಿಗೆ ಬಂಧನದ ಭೀತಿ ಎದುರಾಗಿದೆ.