ಬೆಂಗಳೂರು, ಸೆ 13(DaijiworldNews/SM): ರಾಜ್ಯದ ದಿಟ್ಟ ನಾಯಕ ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್ ಡಿಕೆ ಶಿವಕುಮಾರ್ ಇದೀಗ ಇಡಿ ಖೆಡ್ಡದಲ್ಲಿದ್ದಾರೆ. ಎಷ್ಟೇ ಚಡಬಡಿಸಿದರೂ ಇಡಿ ಈಟಿಯಿಂದ ತಪ್ಪಿಸಲಾಗುತ್ತಿಲ್ಲ. ಅಕ್ರಮ ಹಣ ಹೊಂದಿರುವ ಆರೋಪದ ಹಿನ್ನೆಲೆಯಲ್ಲಿ ವಿಚಾರಣೆ ತೀವ್ರಗೊಳಿಸಲಾಗಿದ್ದು, ಮಾಜಿ ಸಚಿವ ಹೈರಾಣಾಗಿದ್ದಾರೆ.
ಯಾವುದೇ ಸನ್ನಿವೇಶದಲ್ಲೂ ಎದೆಗುಂದದೆ ಮುನ್ನುಗ್ಗುತ್ತಿದ್ದ ಡಿಕೆಶಿಯ ಎದೆಯಲ್ಲೀಗ ನಡುಕ ಶುರುವಾಗಿದೆ. ತನ್ನನ್ನು ಮಾತ್ರ ಸಾಲದ್ದಕ್ಕೆ ಅವರ ಮಗಳಿಗೂ ಕೂಡ ಇಡಿ ಶಾಕ್ ನೀಡಿದೆ. ಡಿಕೆಶಿ ಪರವಾದ ವಕೀಲರು ಕೋರ್ಟ್ ನಲ್ಲಿ ಎಷ್ಟೇ ವಾದಿಸಿದರೂ ಡಿಕೆಶಿ ಪರ ತೀರ್ಪು ಪ್ರಕಟವಾಗುತ್ತಿಲ್ಲ. ಒಂದು ಹಂತದಲ್ಲಿ ರಾಜಕೀಯವಾಗಿ ನಿರ್ಣಾಮದ ಹಾದಿಯತ್ತ ಡಿಕೆಶಿ ಸಾಗಿದರೂ ಅಚ್ಚರಿಯಿಲ್ಲ.
ಕನಕಪುರಬಂಡೆ, ಎಂಟೆದೆಯ ಭಂಟನಿಗೆ ಈ ಪರಿಸ್ಥಿತಿ ಬಂದೊದಗಲು ರಾಜಕೀಯ ವೈಶಮ್ಯ ಕಾರಣವೆನ್ನಲಾಗುತ್ತಿದೆ. ಅಲ್ಲದೆ ಇದನ್ನೇ ಅವರ ಸಹೋದರ ಡಿಕೆ ಸುರೇಶ್ ಪದೇ ಪದೇ ಹೇಳಿಕೊಂಡು ಬಂದಿದ್ದಾರೆ. ಒಂದೊಮ್ಮೆ ಡಿಕೆಶಿ ಕ್ಲೀನ್ ಹ್ಯಾಂಡ್ ಎಂದಿದ್ದರೆ, ಇಷ್ಟೊಂದು ಪ್ರಮಾಣದ ಹಣ ಸಂಗ್ರಹದ ಅಗತ್ಯವಾದರೂ ಎನಿತ್ತು? ಈ ಹಣವನ್ನು ಅಗತ್ಯವಿದ್ದವರಿಗೆ ಹಂಚಬಹುದಿತ್ತು ಎನ್ನುವುದು ಜನಸಾಮಾನ್ಯರ ಮಾತಾಗಿದೆ. ಅದೇನೇ ಇದ್ದರೂ ಅವರ ವೈಯುಕ್ತಿಕ ವಿಚಾರವಾಗಿದೆ. ಆದರೆ, ಈ ನಡುವೆ ಅವರಿಗೆ ಇಷ್ಟೊಂದು ದೊಡ್ಡ ಸಂಕಷ್ಟ ಎದುರಾಗಲು ದೈವದ ಶಾಪ ಎನ್ನಲಾಗುತ್ತಿದೆ.
ಮೈಲಾರಲಿಂಗೇಶ್ವರನ ಅಪಚಾರದಿಂದ ಸಂಕಷ್ಟ!
ಮಾಜಿ ಸಚಿವ ಡಿ.ಕೆ. ಶಿವಕುಮಾರ್ ಇಂದಿನ ದುಃಸ್ಥಿತಿಗೆ ಅಂದು ಮೈಲಾರ ಲಿಂಗ ದೇಗುಲದ ಬಳಿ ನಡೆದ ಅಪಚಾರವೆ ಕಾರಣ ಎಂದು ಮೈಲಾರಲಿಂಗೇಶ್ವರ ದೇವಸ್ಥಾನ ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಹೇಳಿದ್ದಾರೆ.
ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಸುಕ್ಷೇತ್ರ ಮೈಲಾರದ ಮೈಲಾರಲಿಂಗೇಶ್ವರ ದೇಗುಲದ ವತಿಯಿಂದ ನಡೆಯುವ ಕಾರ್ಣಿಕ ಭವಿಷ್ಯ ವಾಣಿ ಕಾರ್ಯಕ್ರಮ ನೋಡಲು ಡಿಕೆ ಶಿವಕುಮಾರ್ ಅವರು ಹೆಲಿಕಾಪ್ಟರ್ ಮೂಲಕ ತೆರಳಿದ್ದರು. ಈ ಸಂದರ್ಭದಲ್ಲಿ ಅವರ ಹೆಲಿಕಾಪ್ಟರ್ ಮೈಲಾರಲಿಂಗೇಶ್ವರ ದೇವಸ್ಥಾನ ಮತ್ತು ಕಾರ್ಣಿಕ ನುಡಿಯುವ ಡೆಂಕಣಮರಡಿ ಕ್ಷೇತ್ರದ ಮೇಲೆ ಹಾರಾಡಿದೆ. ಇದರಿಂದಾಗಿಯೇ ಡಿ.ಕೆ. ಶಿವಕುಮಾರ್ ಅವರಿಗೆ ಸಂಕಷ್ಟ ಎದುರಾಗಿದೆ ಎಂದು ಧರ್ಮದರ್ಶಿ ವೆಂಕಪ್ಪಯ್ಯ ಒಡೆಯರ್ ಅವರು ಹೇಳಿಕೆ ನೀಡಿದ್ದಾರೆ.
ಒಟ್ಟಾರೆಯಾಗಿ ಕನಕಪುರ ಬಂಡೆ ಎಂದೇ ಕರೆಸಿಕೊಂಡಿರುವ ಡಿಕೆಶಿಯವರ ಬಂಧನದಿಂದ ರಾಜಕೀಯ ವಲಯದಲ್ಲಿ ಹಲವು ರೀತಿಯ ತಲ್ಲಣವುಂಟಾಗಿದೆ. ಎಷ್ಟೇ ಹರಸಾಹಸ ಪಟ್ಟರೂ ಇಡಿ ಖೆಡ್ಡದಿಂದ ಹೊರಬರಲಾಗದೆ ಡಿಕೆಶಿ ಚಡಪಡಿಸುತ್ತಿದ್ದಾರೆ. ಜಾಮೀನು ಸಿಗಬಹುದು ಎಂದು ಆಸೆಯಿಂದ ಕಾಯುತ್ತಿದ್ದ ಡಿಕೆಶಿಗೆ ಮತ್ತೊಮ್ಮೆ ನಿರಾಸೆಯಾಗಿದೆ. ಇನ್ನು ಸೆಪ್ಟೆಂಬರ್ 17ರ ತನಕ ಇಡಿ ವಶದಲ್ಲಿರಲಿದ್ದು, ಬಳಿಕ ಬಿಡುಗಡೆ ಭಾಗ್ಯ ಸಿಗುತ್ತ ಅಥವಾ ಸೆರೆವಾಸ ಮುಂದುವರೆಯುತ್ತಾ ಎಂಬುವುದು ಕುತೂಹಲ.