ನವದೆಹಲಿ, ಸೆ.14(Daijiworld News/SS): ಡಿಕೆ ಶಿವಕುಮಾರ್ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳೂ ಇಲ್ಲ ಎಂದು ಡಿಕೆಶಿ ಅವರ ಸಹೋದರ ಡಿ.ಕೆ.ಸುರೇಶ್ ಹೇಳಿದ್ದಾರೆ.
ಡಿಕೆ ಶಿವಕುಮಾರ್ ಮೇಲೆ ಭ್ರಷ್ಟಾಚಾರದ ಆರೋಪಗಳೂ ಇಲ್ಲ. ನ್ಯಾಯಾಲಯದ ದಿಕ್ಕುತಪ್ಪಿಸುವ ಯತ್ನವನ್ನು ಇಡಿ ಮಾಡುತ್ತಿದೆ. ನ್ಯಾಯಾಲಯದಲ್ಲಿ ಹುರುಳಿಲ್ಲದ ಆರೋಪಗಳನ್ನೆಲ್ಲಾ ಮಾಡಲಾಗುತ್ತಿದೆ. 800 ಕೋಟಿ ಆಸ್ತಿ ಇರುವುದನ್ನು ಡಿಕೆಶಿ ಅವರೇ ಘೋಷಿಸಿಕೊಂಡಿದ್ದಾರೆ. ಶಿವಕುಮಾರ್ ಅವರ ಒಟ್ಟು ಆಸ್ತಿಯ ಈಗಿನ ಮೌಲ್ಯ 800 ಕೋಟಿ ಇರುವುದು ಸತ್ಯ. ಅದು ಬೇನಾಮಿ ಅಲ್ಲ, ಅವರ ಸ್ವಂತದ್ದು ಎಂದು ಹೇಳಿದರು.
ಐಟಿ ಇಲಾಖೆಯು ಹೇಗೆ 87 ಮನೆಗಳ ಮೇಲೆ ದಾಳಿ ನಡೆಸಿ ಎಲ್ಲ ಹಣವೂ, ಆಸ್ತಿಯೂ ನಮ್ಮದೇ ಎಂದು ಬಿಂಬಿಸಿತೋ ಹಾಗೆಯೇ ಇಡಿ ಸಹ ರಾಜಕೀಯ ಒತ್ತಡಕ್ಕೆ ಮಣಿದು ನಮ್ಮದಲ್ಲದ ಖಾತೆಗಳನ್ನು, ಆಸ್ತಿಗಳನ್ನು ನಮ್ಮದೆಂದು ಬಿಂಬಿಸಲು ಹೊರಟಿದೆ. ಡಿಕೆಶಿ ಅವರ ಮೇಲೆ ಯಾವ ಕ್ರಿಮಿನಲ್ ಮೊಕದ್ದಮೆಗಳೂ ಇಲ್ಲ. ಅವರ ಮೇಲೆ ಭ್ರಷ್ಟಾಚಾರದ ಆರೋಪಗಳೂ ಇಲ್ಲ ಎಂದು ತಿಳಿಸಿದರು.
ಇಡಿ ಹೇಳಿದಂತೆ 317 ಖಾತೆಯನ್ನು ಡಿ.ಕೆ.ಶಿವಕುಮಾರ್ ಹೊಂದಿರುವುದನ್ನು ಇಡಿ ಸಾಬೀತು ಪಡಿಸಲಿ. ಅವರು ನ್ಯಾಯಾಲಯದಲ್ಲಿ ಹೇಳಿದ್ದಾರೆಂದರೆ ಅದನ್ನು ಸಾಬೀತು ಪಡಿಸಲೇಬೇಕು ಎಂದು ಸವಾಲು ಹಾಕಿದರು.