ವಾರಾಣಸಿ, ಸೆ.17 (DaijiworldNews/TA): ಪ್ರಧಾನಿ ನರೇಂದ್ರ ಮೋದಿ ಅವರ 76ನೇ ಹುಟ್ಟುಹಬ್ಬದ ಅಂಗವಾಗಿ ಅವರ ಸಂಸದೀಯ ಕ್ಷೇತ್ರ ವಾರಾಣಸಿಯಿಂದ ಹುಟ್ಟೂರು ಗುಜರಾತ್ನ ವಡ್ನಗರದವರೆಗೆ ಬೃಹತ್ ‘ಸೇವಾ ಸಂಕಲ್ಪ’ ಬೈಕ್ ಯಾತ್ರೆಗೆ ಚಾಲನೆ ನೀಡಲಾಗಿದೆ.

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಯಾತ್ರೆಗೆ ಹಸಿರು ನಿಶಾನೆ ತೋರಿಸಿದರು. ಸುಮಾರು 500 ಯುವ ಬೈಕ್ ಸವಾರರು ಭಾಗವಹಿಸಿರುವ ಈ ಯಾತ್ರೆಯಲ್ಲಿ ಕಾಶಿಯಿಂದ ಸಂಗ್ರಹಿಸಲಾದ ಪವಿತ್ರ ಗಂಗಾಜಲವನ್ನು ವಡ್ನಗರದ ಹಾಟಕೇಶ್ವರ ಮಹಾದೇವ ದೇವಸ್ಥಾನಕ್ಕೆ ಕೊಂಡೊಯ್ಯಲಾಗುತ್ತಿದೆ.
ಯಾತ್ರೆ ಆರಂಭಕ್ಕೂ ಮುನ್ನ 51 ಬೈಕ್ ಸವಾರರು ವಾರಾಣಸಿಯ ಲಲಿತಾ ಘಾಟ್ನಲ್ಲಿ ಶಂಖನಾದ ಹಾಗೂ ಡಮರು ವಾದನದ ನಡುವೆ ಗಂಗಾಜಲ ಸಂಗ್ರಹಿಸಿದರು. ಬಳಿಕ ಕಾಶಿ ವಿಶ್ವನಾಥ ದೇವಸ್ಥಾನದಲ್ಲಿ ಈ ಗಂಗಾಜಲದಿಂದ ಮಹಾ ರುದ್ರಾಭಿಷೇಕ ನೆರವೇರಿಸಿ, ಪ್ರಧಾನಿ ನರೇಂದ್ರ ಮೋದಿ ಅವರ ಆಯುರಾರೋಗ್ಯಕ್ಕಾಗಿ ವಿಶೇಷ ಪ್ರಾರ್ಥನೆ ಸಲ್ಲಿಸಲಾಯಿತು. ಸೆಪ್ಟೆಂಬರ್ 17ರಿಂದ ಅಕ್ಟೋಬರ್ 7ರವರೆಗೆ ನಡೆಯಲಿರುವ ‘ಸೇವಾ ಸಂಕಲ್ಪ’ ಬೈಕ್ ಯಾತ್ರೆ ಸುಮಾರು 40 ಸಾವಿರ ಕಿಲೋಮೀಟರ್ ದೂರ ಕ್ರಮಿಸಲಿದೆ. 10 ರಾಜ್ಯಗಳ 193 ಜಿಲ್ಲೆಗಳು, 773 ತಾಲೂಕುಗಳು ಹಾಗೂ 1,159ಕ್ಕೂ ಹೆಚ್ಚು ಹಳ್ಳಿಗಳ ಮೂಲಕ ಯಾತ್ರೆ ಸಾಗಲಿದೆ. ಉತ್ತರ ಪ್ರದೇಶವೊಂದರಲ್ಲೇ 50 ಜಿಲ್ಲೆಗಳನ್ನು ಯಾತ್ರೆ ಒಳಗೊಂಡಿದೆ.
ಇದೇ ವೇಳೆ ಗುಜರಾತ್ನ ವಡ್ನಗರದಿಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ನೇತೃತ್ವದಲ್ಲಿ ಮತ್ತೊಂದು ಬೈಕ್ ಯಾತ್ರೆ ಆರಂಭವಾಗಿದ್ದು, ಗುಜರಾತ್ನ ವಿವಿಧ ನದಿಗಳ ಪವಿತ್ರ ಜಲವನ್ನು ಕಾಶಿಗೆ ಕೊಂಡೊಯ್ಯಲಾಗುತ್ತಿದೆ. ಎರಡೂ ಯಾತ್ರೆಗಳು ಪರಸ್ಪರ ಪವಿತ್ರ ಜಲ ವಿನಿಮಯದ ಸಂದೇಶವನ್ನು ಸಾರಲಿವೆ. ಯಾತ್ರೆಯ ಚಾಲನಾ ಕಾರ್ಯಕ್ರಮದಲ್ಲಿ ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು, ಕೇಂದ್ರ ಸಚಿವ ಚಿರಾಗ್ ಪಾಸ್ವಾನ್, ಉತ್ತರ ಪ್ರದೇಶದ ಉಪಮುಖ್ಯಮಂತ್ರಿಗಳಾದ ಕೇಶವ ಪ್ರಸಾದ್ ಮೌರ್ಯ ಮತ್ತು ಬ್ರಜೇಶ್ ಪಾಠಕ್ ಸೇರಿದಂತೆ ಎನ್ಡಿಎ ಮೈತ್ರಿಕೂಟದ ಹಲವು ಪ್ರಮುಖ ನಾಯಕರು ಭಾಗವಹಿಸಿದ್ದರು.
ಯಾತ್ರೆ ಸಾಗುವ ಮಾರ್ಗದ ವಿವಿಧ ಸ್ಥಳಗಳಲ್ಲಿ ಬಿಜೆಪಿ ಹಾಗೂ ಭಾರತೀಯ ಜನತಾ ಯುವ ಮೋರ್ಚಾ ಕಾರ್ಯಕರ್ತರಿಂದ ಹಲವು ಸಮಾಜಮುಖಿ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ. ಗಿಡ ನೆಡುವುದು, ಸ್ವಚ್ಛತಾ ಅಭಿಯಾನ, ಕ್ಷಯರೋಗ ಮುಕ್ತ ಭಾರತ ಕುರಿತು ಜಾಗೃತಿ ಮೂಡಿಸುವುದು ಹಾಗೂ ಪೌರಕಾರ್ಮಿಕರನ್ನು ಸನ್ಮಾನಿಸುವ ಕಾರ್ಯಕ್ರಮಗಳು ನಡೆಯಲಿವೆ.
ಇದೇ ಸಂದರ್ಭದಲ್ಲಿ ವಾರಾಣಸಿಯ ರುದ್ರಾಕ್ಷ ಸಮಾವೇಶ ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ 25 ವರ್ಷಗಳ ಸಾರ್ವಜನಿಕ ಜೀವನವನ್ನು ಬಿಂಬಿಸುವ ಅಪರೂಪದ ಛಾಯಾಚಿತ್ರ ಪ್ರದರ್ಶನವನ್ನು ಆಯೋಜಿಸಲಾಗಿದೆ. ಗುಜರಾತ್ ಮುಖ್ಯಮಂತ್ರಿಯಾಗಿ 13 ವರ್ಷ ಹಾಗೂ ದೇಶದ ಪ್ರಧಾನಿಯಾಗಿ 12 ವರ್ಷ ಸೇರಿದಂತೆ ಒಟ್ಟು 25 ವರ್ಷಗಳ ಸಾರ್ವಜನಿಕ ಜೀವನದ ವಿವಿಧ ಹಂತಗಳ ಚಿತ್ರಗಳನ್ನು ಪ್ರದರ್ಶನದಲ್ಲಿ ಇರಿಸಲಾಗಿದೆ.