ಉಧಂಪುರ, ಸೆ.17 (DaijiworldNews/TA): ಜಮ್ಮು ಮತ್ತು ಕಾಶ್ಮೀರದ ಉಧಂಪುರ ಜಿಲ್ಲೆಯ ಅರಣ್ಯ ಪ್ರದೇಶದಲ್ಲಿ ಭದ್ರತಾ ಪಡೆಗಳು ಹಾಗೂ ಉಗ್ರರ ನಡುವೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ.

ಜಮ್ಮು-ಕಾಶ್ಮೀರ ಪೊಲೀಸರ ವಿಶೇಷ ಕಾರ್ಯಾಚರಣಾ ಪಡೆ ಹಾಗೂ ಭಾರತೀಯ ಸೇನೆಯ ಜಂಟಿ ತಂಡವು ನಡೆಸಿದ ಕಾರ್ಯಾಚರಣೆಯಲ್ಲಿ ಈ ಉಗ್ರರು ಹತರಾಗಿದ್ದಾರೆ. ಕಾರ್ಯಾಚರಣೆ ವೇಳೆ ಸ್ಥಳದಿಂದ ಶಸ್ತ್ರಾಸ್ತ್ರ, ಮದ್ದುಗುಂಡುಗಳು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಉಳಿದ ಉಗ್ರರಿಗಾಗಿ ಅರಣ್ಯ ಪ್ರದೇಶದಲ್ಲಿ ಶೋಧ ಕಾರ್ಯಾಚರಣೆ ಮುಂದುವರಿದಿದೆ. ಉಧಂಪುರ ಜಿಲ್ಲೆಯ ದುರ್ಗಮ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಭದ್ರತಾ ಪಡೆಗಳಿಗೆ ಖಚಿತ ಮಾಹಿತಿ ಲಭ್ಯವಾಗಿತ್ತು. ಈ ಹಿನ್ನೆಲೆಯಲ್ಲಿ ಸೇನೆ ಹಾಗೂ ಪೊಲೀಸರು ಜಂಟಿಯಾಗಿ ಶೋಧ ಮತ್ತು ಸುತ್ತುವರಿಕೆ ಕಾರ್ಯಾಚರಣೆ ಆರಂಭಿಸಿದ್ದರು.
ಈ ವೇಳೆ ಭದ್ರತಾ ಪಡೆಗಳ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ್ದು, ಪ್ರತಿಯಾಗಿ ಯೋಧರು ಗುಂಡಿನ ದಾಳಿ ನಡೆಸಿದ್ದಾರೆ. ತಡರಾತ್ರಿ ನಡೆದ ಈ ಗುಂಡಿನ ಚಕಮಕಿಯಲ್ಲಿ ಇಬ್ಬರು ಉಗ್ರರು ಹತರಾಗಿದ್ದಾರೆ. ಹತರಾದ ಉಗ್ರರ ಗುರುತು ಹಾಗೂ ಅವರು ಯಾವ ಉಗ್ರ ಸಂಘಟನೆಗೆ ಸೇರಿದವರು ಎಂಬುದನ್ನು ಭದ್ರತಾ ಪಡೆಗಳು ಪರಿಶೀಲಿಸುತ್ತಿವೆ. ಎನ್ಕೌಂಟರ್ ನಡೆದ ಸ್ಥಳದಿಂದ ಎಕೆ ಸರಣಿಯ ರೈಫಲ್ಗಳು, ಮದ್ದುಗುಂಡುಗಳು ಹಾಗೂ ಸಂವಹನಕ್ಕೆ ಬಳಸುವ ಸಾಧನಗಳನ್ನು ವಶಪಡಿಸಿಕೊಳ್ಳಲಾಗಿದೆ. ಪ್ರದೇಶದಲ್ಲಿ ಇನ್ನಷ್ಟು ಉಗ್ರರು ಅಡಗಿರುವ ಸಾಧ್ಯತೆಯ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಅರಣ್ಯ ಪ್ರದೇಶವನ್ನು ಭದ್ರತಾ ಪಡೆಗಳು ಸುತ್ತುವರಿದಿದ್ದು, ಶೋಧ ಕಾರ್ಯಾಚರಣೆ ಮುಂದುವರಿದಿದೆ.
ಇದೇ ತಿಂಗಳ ಆರಂಭದಲ್ಲಿ ಬುದ್ಗಾಮ್ ಜಿಲ್ಲೆಯ ಯುಸ್ಮಾರ್ಗ್ ಅರಣ್ಯ ಪ್ರದೇಶದಲ್ಲಿ ಸೇನೆಯ 53 ರಾಷ್ಟ್ರೀಯ ರೈಫಲ್ಸ್ (RR) ಹಾಗೂ ವಿಶೇಷ ಪಡೆಗಳು ನಡೆಸಿದ ಕಾರ್ಯಾಚರಣೆಯಲ್ಲಿ ಲಷ್ಕರ್-ಎ-ತೊಯ್ಬಾ (LeT) ಕಮಾಂಡರ್ ಎಂದು ಗುರುತಿಸಲಾಗಿದ್ದ ಪಾಕಿಸ್ತಾನ ಮೂಲದ ಯಾಸಿರ್ ಹತನಾಗಿದ್ದ. ಕಾಶ್ಮೀರ ಕಣಿವೆಯ ಜತೆಗೆ ಜಮ್ಮು ವಲಯದ ದೋಡಾ, ಕಿಶ್ತ್ವಾರ್ ಮತ್ತು ಉಧಂಪುರದ ಅರಣ್ಯ ಹಾಗೂ ಪರ್ವತ ಪ್ರದೇಶಗಳನ್ನು ನುಸುಳುವಿಕೆಗೆ ಬಳಸಿಕೊಳ್ಳುವ ಸಾಧ್ಯತೆ ಹಿನ್ನೆಲೆಯಲ್ಲಿ ಭದ್ರತಾ ಪಡೆಗಳು ಈ ಪ್ರದೇಶಗಳಲ್ಲಿ ಶೋಧ ಕಾರ್ಯಾಚರಣೆಗಳನ್ನು ತೀವ್ರಗೊಳಿಸಿವೆ.