ಮುಂಬೈ, ಸೆ.17 (DaijiworldNews/TA): ಸಾಮಾನ್ಯವಾಗಿ ಮೆಟ್ರೋ ನಿಲ್ದಾಣಗಳಲ್ಲಿ ಪ್ರಯಾಣಿಕರ ಸುರಕ್ಷತೆ ಮತ್ತು ನಿರ್ವಹಣೆಗೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಾರೆ. ಆದರೆ, ಮುಂಬೈನ ಗುಂಡವಲಿ ಮೆಟ್ರೋ ನಿಲ್ದಾಣದಲ್ಲಿ ಪ್ರಯಾಣಿಕರ ಗಮನ ಸೆಳೆಯುತ್ತಿರುವ ಬೆಕ್ಕೊಂದಕ್ಕೆ ಇದೀಗ ವಿಶೇಷ ‘ಅಧಿಕಾರಿ’ ಹುದ್ದೆ ಸಿಕ್ಕಿದೆ.

ಗುಂಡವಲಿ ಮೆಟ್ರೋ ನಿಲ್ದಾಣದ ಪ್ರವೇಶ ದ್ವಾರದ ಬಳಿ ಪ್ರತಿದಿನ ಕಾಣಿಸಿಕೊಳ್ಳುವ ಈ ಬೆಕ್ಕು, ಪ್ರಯಾಣಿಕರೊಂದಿಗೆ ಬೆರೆಯುತ್ತಾ ಅಲ್ಲೇ ಆರಾಮವಾಗಿ ಕುಳಿತುಕೊಳ್ಳುತ್ತದೆ. ಕೆಲವೊಮ್ಮೆ ನಿದ್ರಿಸುತ್ತಿರುವುದು ಕಂಡುಬಂದರೂ, ಮೆಟ್ರೋ ನಿಲ್ದಾಣಕ್ಕೆ ಬರುವ ಪ್ರಯಾಣಿಕರಿಗೆ ಇದು ಪರಿಚಿತ ಮುಖವಾಗಿದೆ.
ಗುಂಡವಲಿ ಮೆಟ್ರೋ ನಿಲ್ದಾಣದ ಪ್ರವೇಶದ್ವಾರದ ಬಳಿ ಕುಳಿತಿದ್ದ ಬೆಕ್ಕಿನ ಫೋಟೋವನ್ನು ಪ್ರಯಾಣಿಕ ಸಂದೇಶ್ ಸಾಮಂತ್ ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದರು. ಮುಂಬೈ ಮೆಟ್ರೋ ಸಂಸ್ಥೆಯನ್ನು ಟ್ಯಾಗ್ ಮಾಡಿದ್ದ ಅವರು, ಈ ಮುದ್ದಾದ ಬೆಕ್ಕಿಗೆ ಯಾವುದಾದರೂ ಅಧಿಕೃತ ಹುದ್ದೆ ನೀಡಬೇಕು. ಯಾವುದೇ ಸಂಬಳ ಪಡೆಯದೆ ಇದು ಉಚಿತವಾಗಿ ಸೇವೆ ಸಲ್ಲಿಸುತ್ತಿದೆ ಎಂದು ತಮಾಷೆಯಾಗಿ ಬರೆದುಕೊಂಡಿದ್ದರು. ಈ ಪೋಸ್ಟ್ಗೆ ಮಹಾ ಮುಂಬೈ ಮೆಟ್ರೋ ಸಂಸ್ಥೆ ಕೂಡ ಹಾಸ್ಯಮಯವಾಗಿ ಪ್ರತಿಕ್ರಿಯಿಸಿದೆ. ಬೆಕ್ಕಿನ ಫೋಟೋ ಹಂಚಿಕೊಂಡ ಸಂಸ್ಥೆ, ಅದನ್ನು ತಮ್ಮ ‘ಚೀಫ್ ಫೆಲೈನ್ ಆಫೀಸರ್’ ಎಂದು ಹೆಸರಿಸಿದೆ.
ಏನು ಈ ‘ಅಧಿಕಾರಿ’ಯ ಕೆಲಸ? : ಮೆಟ್ರೋ ಸಂಸ್ಥೆಯ ಪ್ರಕಾರ, ಈ ವಿಶೇಷ ಅಧಿಕಾರಿಯ ಜವಾಬ್ದಾರಿಗಳೆಂದರೆ ಮೆಟ್ರೋ ನಿಲ್ದಾಣವನ್ನು ಪರಿಶೀಲಿಸುವುದು, ಪ್ರಯಾಣಿಕರ ಚಲನವಲನದ ಮೇಲೆ ನಿಗಾ ಇಡುವುದು ಹಾಗೂ ಎಲ್ಲರಿಗೂ ಕಾಣುವ ರೀತಿಯಲ್ಲಿ ಸೂಕ್ತ ಸ್ಥಳದಲ್ಲಿ ಕುಳಿತು ಪ್ರಯಾಣಿಕರನ್ನು ಸ್ವಾಗತಿಸುವುದು. ಇಲ್ಲಿಯವರೆಗೆ ಈ ಅಧಿಕಾರಿಯ ಕಾರ್ಯಕ್ಷಮತೆ ಅತ್ಯುತ್ತಮವಾಗಿದೆ ಎಂದು ಮೆಟ್ರೋ ಸಂಸ್ಥೆ ತಮಾಷೆಯಾಗಿ ಪ್ರತಿಕ್ರಿಯಿಸಿದೆ.
ಮೆಟ್ರೋ ಸಂಸ್ಥೆಯ ಈ ಪ್ರತಿಕ್ರಿಯೆ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಗಮನ ಸೆಳೆದಿದೆ. ಹಲವು ನೆಟ್ಟಿಗರು ಬೆಕ್ಕಿನ ಫೋಟೋ ಹಾಗೂ ಮೆಟ್ರೋ ಸಂಸ್ಥೆಯ ಪ್ರತಿಕ್ರಿಯೆಯನ್ನು ಮೆಚ್ಚಿಕೊಂಡಿದ್ದಾರೆ. ‘ನಾನು ಪ್ರತಿದಿನ ಗುಂಡವಲಿ ಮೆಟ್ರೋ ನಿಲ್ದಾಣಕ್ಕೆ ಬಂದಾಗ ಈ ಬೆಕ್ಕನ್ನು ಹುಡುಕುತ್ತೇನೆ’ ಎಂದು ಕೆಲವರು ಕಾಮೆಂಟ್ ಮಾಡಿದ್ದರೆ, ಮತ್ತೊಬ್ಬರು ಇದನ್ನು ‘ಮುಖ್ಯ ಇಲಿ ಹಿಡಿಯುವ ಅಧಿಕಾರಿ’ ಎಂದು ತಮಾಷೆ ಮಾಡಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಈ ಬೆಕ್ಕು ಗುಂಡವಲಿ ಮೆಟ್ರೋ ನಿಲ್ದಾಣದ ಸುತ್ತಮುತ್ತ ಕಾಣಿಸಿಕೊಳ್ಳುತ್ತಿದೆ ಎಂದು ಕೆಲ ಪ್ರಯಾಣಿಕರು ಸಾಮಾಜಿಕ ಜಾಲತಾಣಗಳಲ್ಲಿ ತಿಳಿಸಿದ್ದಾರೆ. ಒಟ್ಟಿನಲ್ಲಿ, ಯಾವುದೇ ಅಧಿಕೃತ ಸರ್ಕಾರಿ ಹುದ್ದೆಯಲ್ಲದಿದ್ದರೂ, ಮೆಟ್ರೋ ಸಂಸ್ಥೆಯ ಹಾಸ್ಯಮಯ ಪ್ರತಿಕ್ರಿಯೆಯಿಂದಾಗಿ ಗುಂಡವಲಿ ನಿಲ್ದಾಣದ ಈ ಮುದ್ದಾದ ಬೆಕ್ಕು ಇದೀಗ ಸಾಮಾಜಿಕ ಜಾಲತಾಣದಲ್ಲಿ ‘ಚೀಫ್ ಫೆಲೈನ್ ಆಫೀಸರ್’ ಆಗಿ ಜನಪ್ರಿಯವಾಗಿದೆ.