ನಾಸಿಕ್, ಸೆ.17 (DaijiworldNews/TA): ಬೀದಿ ನಾಯಿಗಳ ಹಾವಳಿ ನಿಯಂತ್ರಿಸುವಲ್ಲಿ ನಗರ ಪಂಚಾಯತ್ ಆಡಳಿತ ವಿಫಲವಾಗಿದೆ ಎಂದು ಆರೋಪಿಸಿ ಶಿವಸೇನೆಯ ಯುವ ಘಟಕವಾದ ಯುವಸೇನಾ ಕಾರ್ಯಕರ್ತರು ಮಹಾರಾಷ್ಟ್ರದ ನಾಸಿಕ್ ಜಿಲ್ಲೆಯ ನಿಫಡ್ ನಗರ ಪಂಚಾಯತ್ ಕಚೇರಿಯಲ್ಲಿ ವಿನೂತನ ರೀತಿಯಲ್ಲಿ ಪ್ರತಿಭಟನೆ ನಡೆಸಿದ್ದಾರೆ.

ಯುವಸೇನಾ ಜಿಲ್ಲಾ ಮುಖಂಡ ವಿಕ್ರಮ್ ರಾಂಧವೆ ನೇತೃತ್ವದಲ್ಲಿ ನಗರ ಪಂಚಾಯತ್ ಕಚೇರಿಗೆ ತೆರಳಿದ ಕಾರ್ಯಕರ್ತರು, ಎರಡು ಬೀದಿ ನಾಯಿಗಳನ್ನು ನೇರವಾಗಿ ಮುಖ್ಯ ಅಧಿಕಾರಿ ಧೀರಜ್ ಭಮ್ರೆ ಅವರ ಕಚೇರಿ ಮೇಜಿನ ಮೇಲೆ ಬಿಟ್ಟು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸಣ್ಣ ಚೀಲಗಳಲ್ಲಿ ನಾಯಿಗಳನ್ನು ಕಚೇರಿಗೆ ತಂದಿದ್ದ ಕಾರ್ಯಕರ್ತರು, ಅವುಗಳನ್ನು ಅಧಿಕಾರಿಯ ಮೇಜಿನ ಮೇಲೆ ಬಿಟ್ಟಿದ್ದಾರೆ. ಅಪರಿಚಿತ ವಾತಾವರಣದಿಂದ ಗೊಂದಲಕ್ಕೊಳಗಾದ ನಾಯಿಗಳು ಮೇಜಿನ ಮೇಲೆಯೇ ಓಡಾಡುತ್ತಿದ್ದ ದೃಶ್ಯ ಕಂಡುಬಂದಿದೆ. ಈ ವೇಳೆ ಕಾರ್ಯಕರ್ತರು ಅಧಿಕಾರಿಯ ಮೇಜಿನ ಮೇಲೆ ನೋಟುಗಳಿಂದ ಮಾಡಿದ ಹಾರವನ್ನೂ ಹಾಕಿ, ಆಡಳಿತದ ವಿರುದ್ಧ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಿಫಡ್ ಪಟ್ಟಣದಲ್ಲಿ ಬೀದಿ ನಾಯಿಗಳ ಸಂಖ್ಯೆ ಹೆಚ್ಚಾಗಿದ್ದು, ಮಕ್ಕಳು, ಮಹಿಳೆಯರು ಹಾಗೂ ವಾಹನ ಸವಾರರಿಗೆ ಸಮಸ್ಯೆಯಾಗುತ್ತಿದೆ ಎಂದು ಪ್ರತಿಭಟನಾಕಾರರು ಆರೋಪಿಸಿದ್ದಾರೆ. ನಾಯಿ ಕಡಿತದ ಘಟನೆಗಳು ನಡೆಯುತ್ತಿದ್ದು, ಗಣೇಶೋತ್ಸವದ ಹಿನ್ನೆಲೆಯಲ್ಲಿ ಮಂಟಪಗಳು ಹಾಗೂ ಧಾರ್ಮಿಕ ಕಾರ್ಯಕ್ರಮಗಳಿಗೆ ತೆರಳುವ ಸಾರ್ವಜನಿಕರಲ್ಲೂ ಆತಂಕ ಮೂಡಿದೆ ಎಂದು ಅವರು ಹೇಳಿದ್ದಾರೆ. ಬೀದಿ ನಾಯಿಗಳ ನಿಯಂತ್ರಣಕ್ಕೆ ಸಂತಾನಹರಣ ಶಸ್ತ್ರಚಿಕಿತ್ಸೆ ಹಾಗೂ ನಾಯಿ ಹಿಡಿಯುವ ಕಾರ್ಯಕ್ಕೆ ನಗರ ಪಂಚಾಯತ್ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಯುವಸೇನಾ ಕಾರ್ಯಕರ್ತರು ಒತ್ತಾಯಿಸಿದ್ದಾರೆ.
ಬೀದಿ ನಾಯಿಗಳ ಸಮಸ್ಯೆ ಬಗೆಹರಿಸುವ ಬದಲು ಆಡಳಿತವು ಟೆಂಡರ್ ಪ್ರಕ್ರಿಯೆಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದು ವಿಕ್ರಮ್ ರಾಂಧವೆ ಆರೋಪಿಸಿದ್ದಾರೆ. ಜನರ ಸುರಕ್ಷತೆಯ ದೃಷ್ಟಿಯಿಂದ ತಕ್ಷಣ ಕ್ರಮ ಕೈಗೊಳ್ಳದಿದ್ದರೆ ಮತ್ತಷ್ಟು ತೀವ್ರ ಪ್ರತಿಭಟನೆ ನಡೆಸುವುದಾಗಿ ಅವರು ಎಚ್ಚರಿಕೆ ನೀಡಿದ್ದಾರೆ.
ಬೀದಿ ನಾಯಿಗಳ ನಿಯಂತ್ರಣಕ್ಕೆ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಹಾಗೂ ಪ್ರಾಣಿ ಕಲ್ಯಾಣಕ್ಕೆ ಸಂಬಂಧಿಸಿದ ನಿಯಮಗಳ ಅಡಿಯಲ್ಲಿ ಸಂತಾನಹರಣ ಮತ್ತು ರೇಬೀಸ್ ಲಸಿಕೆ ನೀಡುವಂತಹ ಕ್ರಮಗಳಿಗೆ ಆದ್ಯತೆ ನೀಡಲಾಗುತ್ತದೆ. ಸಮಸ್ಯೆಯನ್ನು ನಿಯಮಾನುಸಾರ ನಿರ್ವಹಿಸುವುದು ಸ್ಥಳೀಯ ಸಂಸ್ಥೆಗಳ ಜವಾಬ್ದಾರಿಯಾಗಿದೆ. ನಿಫಡ್ ನಗರ ಪಂಚಾಯತ್ ಕಚೇರಿಯಲ್ಲಿ ನಡೆದ ಈ ವಿನೂತನ ಪ್ರತಿಭಟನೆಯ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಘಟನೆ ಕುರಿತು ಚರ್ಚೆ ಆರಂಭವಾಗಿದೆ.