ಬೆಂಗಳೂರು, ಸೆ.20 (DaijiworldNews/TA): ಕೋರಮಂಗಲ ಪೊಲೀಸ್ ಠಾಣೆ ವ್ಯಾಪ್ತಿಯ ಹೋಟೆಲ್ವೊಂದರ ಬಳಿ ನಿಲ್ಲಿಸಲಾಗಿದ್ದ ಆಡಿ ಕಾರಿನಲ್ಲಿ ವ್ಯಕ್ತಿಯೊಬ್ಬರ ಮೃತದೇಹ ಪತ್ತೆಯಾಗಿರುವ ಘಟನೆ ಭಾನುವಾರ ಬೆಳಗ್ಗೆ ಬೆಳಕಿಗೆ ಬಂದಿದೆ.

ಮಾಹಿತಿಯ ಪ್ರಕಾರ, KA 51 MG 9786 ನೋಂದಣಿ ಸಂಖ್ಯೆಯ ಆಡಿ ಕಾರು ಮಧ್ಯರಾತ್ರಿ ಸುಮಾರು 2.30ರ ವೇಳೆಗೆ ಹೋಟೆಲ್ ಬಳಿ ಬಂದು ನಿಂತಿತ್ತು. ಬೆಳಗ್ಗೆ ಹೋಟೆಲ್ ಸಿಬ್ಬಂದಿ ತೆರೆಯಲು ಬಂದಾಗ ಕಾರು ಅದೇ ಸ್ಥಳದಲ್ಲಿ ನಿಂತಿರುವುದನ್ನು ಗಮನಿಸಿದ್ದಾರೆ. ಕಾರಿನೊಳಗೆ ವ್ಯಕ್ತಿಯೊಬ್ಬರು ಇರುವುದನ್ನು ಕಂಡ ಸಿಬ್ಬಂದಿ ಅವರನ್ನು ಎಬ್ಬಿಸಲು ಪ್ರಯತ್ನಿಸಿದ್ದಾರೆ. ಆದರೆ ಯಾವುದೇ ಪ್ರತಿಕ್ರಿಯೆ ವ್ಯಕ್ತವಾಗದ ಹಿನ್ನೆಲೆಯಲ್ಲಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಸ್ಥಳಕ್ಕೆ ಆಗಮಿಸಿದ ಕೋರಮಂಗಲ ಪೊಲೀಸರು ಕಾರನ್ನು ಪರಿಶೀಲಿಸಿದಾಗ, ಒಳಗಿದ್ದ ವ್ಯಕ್ತಿ ಮೃತಪಟ್ಟಿರುವುದು ದೃಢಪಟ್ಟಿದೆ. ಮೃತರನ್ನು ಅಕ್ಬರ್ ಎಂದು ಗುರುತಿಸಲಾಗಿದೆ. ಮೇಲ್ನೋಟಕ್ಕೆ ಹೃದಯಾಘಾತದಿಂದ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದ್ದು, ಸಾವಿಗೆ ನಿಖರ ಕಾರಣ ಮರಣೋತ್ತರ ಪರೀಕ್ಷೆಯ ಬಳಿಕವಷ್ಟೇ ತಿಳಿದುಬರಲಿದೆ. ಘಟನಾ ಸ್ಥಳಕ್ಕೆ ಸೋಕ್ ತಂಡ ಹಾಗೂ ಕೋರಮಂಗಲ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.